ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡಗೆ ಮನೆಯೂಟ ಪೂರೈಕೆ ವಿಚಾರದಲ್ಲಿ ಕೋರ್ಟ್ ತನ್ನ ಆದೇಶ ಮಾರ್ಪಡಿಸಿದೆ.
ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ಪವಿತ್ರಾ ಗೌಡ, ನಟ ದರ್ಶನ್ ಹಾಗೂ ಗ್ಯಾಂಗ್, ಮನೆಯೂಟಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ನಟ ದರ್ಶನ್ ಗೆ ಮನೆಯೂಟಕ್ಕೆ ಕೋರ್ಟ್ ನಿರಾಕರಿಸಿತ್ತು. ಪವಿತ್ರಾ ಗೌಡಗೆ ಪ್ರತಿದಿನ ಮನೆಯೂಟ ನೀಡಲು ಕೋರ್ಟ್ ಅವಕಾಶ ನೀಡಿತ್ತು. ಆದರೆ ಜೈಲಾಧಿಕಾರಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಕೈದಿಯೊಬ್ಬಳಿಗೆ ಪ್ರತಿದಿನ ಮನೆಯೂಟಕ್ಕೆ ಅವಕಾಶ ಕೊಟ್ಟರೆ ಜೈಲಿನಲ್ಲಿರುವ ಸಾವಿರಾರು ಕೈದಿಗಳು ತಮಗೂ ಮನೆಯೂಟ ನೀಡಲು ಅವಕಾಶ ಕೇಳುತ್ತಾರೆ ಎಂದು ಆಕ್ಷೇಪಿಸಿ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ಈ ಆದೇಶದಲ್ಲಿ ಮಾರ್ಪಾಡು ಮಾಡಿದೆ. ಪವಿತ್ರಾಗೌಡಗೆ ವಾರಕ್ಕೆ ಒಮ್ಮೆ ಮನೆಯೂಟ ನೀಡಲು ಅವಕಾಶ ನೀಡಿದೆ. ಜೊತೆಗೆ ಆರೋಪಿಗಳಾದ ನಾಗರಾಜು, ಲಕ್ಷ್ಮಣ್‌ಗೂ ಮನೆಯೂಟ ನೀಡಲು ಅವಕಾಶ ನೀಡಿ ಆದೇಶ ಹೊರಡಿಸಿದೆ.




