ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ2 ಆರೋಪಿ ದರ್ಶನ್ ಜಾಮೀನು ಅರ್ಜಿಯನ್ನು ನಾಳೆ(ಅ.10) ಹಾಗೂ ಎ1 ಆರೋಪಿ ಪವಿತ್ರಾ ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಅ.14ಕ್ಕೆ ಮುಂದೂಡಲಾಗಿದೆ.
ಆರೋಪಿ ದರ್ಶನ್, ಪವಿತ್ರಾ, ರವಿಶಂಕರ್, ದೀಪಕ್, ಲಕ್ಷ್ಮಣ್ ಹಾಗೂ ನಾಗರಾಜ್ ಸೇರಿದಂತೆ ಇನ್ನಿತರ ಆರೋಪಿಗಳ ಜಾಮೀನು ಅರ್ಜಿಯನ್ನು ಇಂದು 57ನೇ ಸಿಸಿಎಚ್ ನ್ಯಾಯಾಲಯ ವಿಚಾರಣೆ ನಡೆಸಿದೆ. ವಿಚಾರಣೆಯಲ್ಲಿ ಹಿರಿಯ ವಕೀಲ ಸಿ.ವಿ.ನಾಗೇಶ್ ವಾದಕ್ಕೆ, ಇಂದು (ಅ.9) ಎಸ್‌ಪಿಪಿ ಪ್ರಸನ್ನಕುಮಾರ್ ಸುದೀರ್ಘವಾಗಿ ಪ್ರತಿವಾದ ಮಂಡಿಸಿದ್ದಾರೆ.
ಎಸ್‌ಪಿಪಿ ಅವರ ಪ್ರತಿವಾದದಲ್ಲಿ ಅಂತಿಮವಾಗಿ ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ್, ಎ8 ರವಿಶಂಕರ್, ಎ11 ನಾಗರಾಜು, ಎ12 ಲಕ್ಷ್ಮಣ್ ಅವರಿಗೆ ಜಾಮೀನು ನೀಡಬಾರದು. ಎ13 ಆರೋಪಿಯಾಗಿರುವ ದೀಪಕ್ ಮೇಲೆ ಕೊಲೆ ಕೇಸ್, ಯಾವುದೇ ಅಪಹರಣ ಹಾಗೂ ಆರೋಪ ಇಲ್ಲದ ಕಾರಣ ಅವರಿಗೆ ಜಾಮೀನು ನೀಡಬಹುದು ಎಂದು ಪ್ರತಿವಾದ ಮಂಡಿಸಿದ್ದಾರೆ.
ಈ ಪ್ರತಿವಾದದ ನಂತರ ಸಿ.ವಿ.ನಾಗೇಶ್ ಅವರ ಪ್ರತಿಕ್ರಿಯೆಗೆ ನ್ಯಾಯಾಧೀಶರು ಕಾಲಾವಕಾಶ ನೀಡಿರುವ ಕಾರಣ ಅರ್ಜಿ ವಿಚಾರಣೆಯನ್ನು ಮುಂದೂಡಲಾಗಿದೆ.