ಬೆಂಗಳೂರು : ಹಿಂದೂ, ಬೌದ್ಧ ಮತ್ತು ಸಿಖ್ ಧರ್ಮೀಯರನ್ನು ಹೊರತುಪಡಿಸಿ ಇತರ ಧರ್ಮಕ್ಕೆ ಮತಾಂತರಗೊಂಡವರು ಪರಿಶಿಷ್ಟ ಜಾತಿ (ಎಸ್‌ಸಿ) ಸ್ಥಾನಮಾನ ಮತ್ತು ಮೀಸಲಾತಿ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನಿಂದ ರಾಜ್ಯದಲ್ಲಿರುವ ಸುಮಾರು 12 ಸಾವಿರಕ್ಕೂ ಹೆಚ್ಚು ದಲಿತ ಕ್ರಿಶ್ಚಿಯನ್ನರು ಎಸ್ಸಿ ಎಸ್‌ಟಿ ಕಾಯ್ದೆಯ ರಕ್ಷಣೆ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಈ ತೀರ್ಪು ಬಹುದೊಡ್ಡ ಪರಿಣಾಮ ಬೀರಲಿದ್ದು, ಸುಪ್ರೀಂ ಕೋರ್ಟ್‍ನ 2015ರ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಸಮೀಕ್ಷೆಯ ಪ್ರಕಾರ ಸುಮಾರು 12 ಸಾವಿರಕ್ಕೂ ಹೆಚ್ಚು ದಲಿತ ಕ್ರಿಶ್ಚಿಯನ್ನರಿದ್ದಾರೆ. ಇವರಿಗೀಗ ಶೇ.17ರ ಎಸ್‌ಸಿ ಮೀಸಲಾತಿ, ಉದ್ಯೋಗ, ಬಡ್ತಿ ಮತ್ತು ಸರ್ಕಾರಿ ಯೋಜನೆಗಳ ಲಾಭ ಕೈತಪ್ಪುವ ಆತಂಕ ಎದುರಾಗಿದೆ. ಅವರಿಗ ಧರ್ಮ ಅಥವಾ ಸಾಂವಿಧಾನಿಕ ಹಕ್ಕುಗಳ ನಡುವೆ ಧರ್ಮಸಂಕಟಕ್ಕೆ ಸಿಲುಕಿದ್ದಾರೆ.
ಈ ತೀರ್ಪು ಬಿಜೆಪಿಯ ಮತಾಂತರ ವಿರೋಧಿ ನಿಲುವಿಗೆ ಬಲ ತುಂಬಿದ್ದರೆ, ಕಾಂಗ್ರೆಸ್‌ಗೆ ದೊಡ್ಡ ರಾಜಕೀಯ ತಲೆನೋವಾಗಿದೆ ಎನ್ನಲಾಗಿದೆ.




