Mysore
30
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಜ್ವರದ ಜೊತೆ ಕಣ್ಣು ಕೆಂಪಾಯ್ತಾ.? ಝೀಕಾ ವೈರಸ್‌ ಟೆಸ್ಟ್‌ ಮಾಡಿಸಿ

ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಏರಿಕೆ ಬೆನ್ನಲ್ಲೇ ಈಗ ಝೀಕಾ ವೈರಸ್‌ ಆರ್ಭಟ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿ ಎಚ್ಚರ ವಹಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ರಾಜ್ಯದಲ್ಲಿ ಡೆಂಗ್ಯೂ ಬೆನ್ನಲ್ಲೇ ಝೀಕಾ ವೈರಸ್‌ ಅಬ್ಬರ ಶುರುವಾಗಿದ್ದು, ಶಿವಮೊಗ್ಗದಲ್ಲಿ ವೃದ್ಧ ಬಲಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆಯು ಮಾರ್ಗಸೂಚಿ ಬಿಡುಗಡೆ ಮಾಡಿ ಎಚ್ಚರ ವಹಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಡೆಂಗ್ಯೂ ರೀತಿಯಲ್ಲೇ ಸೋಂಕಿತ ಈಡಿಸ್‌ ಸೊಳ್ಳೆ ಕಚ್ಚುವುದರಿಂದ ಝೀಕಾ ವೈರಸ್‌ ಹರಡುತ್ತದೆ. ಸೋಂಕು ಕಾಣಿಸಿಕೊಂಡ ತಕ್ಷಣ ಎಚ್ಚೆತ್ತು ಚಿಕಿತ್ಸೆ ಪಡೆಯುವ ಸಲುವಾಗಿ ರೋಗದ ಗುಣಲಕ್ಷಣ, ಸೋಂಕು ಉಂಟಾದರೆ ತೆಗೆದುಕೊಳ್ಳಬೇಕಿರುವ ಪರಿಹಾರ ಕ್ರಮ, ಸೊಳ್ಳೆ ನಿಯಂತ್ರಣ ಮಾಡಲು ಮಾಡಬೇಕಿರುವ ಪರಿಹಾರ ಕ್ರಮಗಳ ಬಗ್ಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ.

ಝೀಕಾ ಸೋಂಕು ಉಂಟಾದರೆ ಸಾಮಾನ್ಯವಾಗಿ ಜ್ವರ, ತಲೆನೋವು, ಕಣ್ಣು ಕೆಂಪಾಗುವಿಕೆ, ದದ್ದುಗಳು ಉಂಟಾಗುವುದು ಆಗುತ್ತದೆ. ಜೊತೆಗೆ ಕಾಲು ಮತ್ತು ಸ್ನಾಯುಗಳಲ್ಲಿ ನೋವು ಉಂಟಾಗುತ್ತದೆ. ಇನ್ನು ಬಹುತೇಕರಲ್ಲಿ ಝೀಕಾ ರೋಗ ಲಕ್ಷಣಗಳು ಕಂಡುಬರುವುದಿಲ್ಲ. ಸಾಮಾನ್ಯವಾಗಿ ರೋಗದ ಲಕ್ಷಣ ಕಾಣಿಸಿಕೊಂಡರೆ ೨ ರಿಂದ ೭ ದಿನಗಳವರೆಗೆ ಇರುತ್ತದೆ. ಗರ್ಭಾವಸ್ಥೆಯಲ್ಲಿ ತಾಯಿಯಲ್ಲಿ ಝೀಕಾ ವೈರಸ್‌ ಸೋಂಕು ಕಾಣಿಸಿಕೊಂಡರೆ ಜನಿಸಿದ ಶಿಶುವಿನ ತಲೆಯ ಗಾತ್ರದಲ್ಲಿ ಕಡಿಮೆ ಬೆಳವಣಿಗೆ ಕಂಡು ಬರುವ ಸಾಧ್ಯತೆಯಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಝೀಕಾ ವೈರಸ್‌ನ ಸೋಂಕು ಉಂಟಾದರೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಲಸಿಕೆ ಲಭ್ಯವಿಲ್ಲ. ರೋಗ ಲಕ್ಷಣಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಮನೆಯಲ್ಲಿಯೇ ಚಿಕಿತ್ಸೆ ಪಡೆಯಬಹುದು. ನಿರ್ಜಲೀಕರಣ ತಪ್ಪಿಸಲು ಹೆಚ್ಚು ನೀರಿನ ಅಂಶವುಳ್ಳ ಆಹಾರ ಪದಾರ್ಥ ಸೇವನೆ, ರೋಗ ಲಕ್ಷಣಗಳಿಗೆ ಅನುಗುಣವಾಗಿ ವೈದ್ಯರ ಸಲಹೆಯಂತೆ ನೀಡುವ ಔಷಧಿ ಪಡೆಯುವ ಜೊತೆಗೆ ಸಾಕಷ್ಟು ವಿಶ್ರಾಂತಿ ಪಡೆಯಬೇಕು. ಸೋಂಕು ಬೇರೆಯವರಿಗೆ ಹರಡದಂತೆ ಸೊಳ್ಳೆ ಪರದೆ ಉಪಯೋಗಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

Tags:
error: Content is protected !!