ಬೆಂಗಳೂರು: ಮುಂದಿನ ತಿಂಗಳ ಮಾರ್ಚ್.3ರಂದು ವಿಧಾನಸಭೆ ಅಧಿವೇಶನ ಆರಂಭವಾಗಲಿದ್ದು, ಮಧ್ಯಾಹ್ನದ ಭೋಜನದ ಬಳಿಕ ಕಿರು ನಿದ್ರೆ ಮಾಡುವ ಶಾಸಕರಿಗೆ ಈ ಬಾರಿ ರಿಕ್ಲೈನರ್ ಚೇರ್ ವ್ಯವಸ್ಥೆ ಕಲ್ಪಿಸಲು ಸ್ಪೀಕರ್ ಯು.ಟಿ.ಖಾದರ್ ಮುಂದಾಗಿದ್ದಾರೆ.
ಕಲಾಪದಲ್ಲಿ ಶಾಸಕರ ಹಾಜರಾತಿ ಹೆಚ್ಚಳಕ್ಕೆ ಹಾಗೂ ಬೆಳಿಗ್ಗೆ ಬೇಗ ಕಲಾಪಕ್ಕೆ ಆಗಮಿಸಲು ಅನುವಾಗುವಂತೆ ಸ್ಪೀಕರ್ ಖಾದರ್ ಶಾಸಕರಿಗೆ ವಿಧಾನಸೌಧದಲ್ಲೇ ಉಚಿತವಾಗಿ ಬೆಳಿಗ್ಗೆ 9 ಗಂಟೆಗೆ ಉಪಹಾರ ಹಾಗೂ ಮಧ್ಯಾಹ್ನದ ಭೋಜನ ವ್ಯವಸ್ಥೆ ಕಲ್ಪಿಸಿದ್ದಾರೆ.
ಈ ಮೂಲಕ ಶಾಸಕರು ಹೊರಗಡೆ ಉಪಹಾರ ಮಾಡಿ ಕಲಾಪಕ್ಕೆ ತಡವಾಗಿ ಬರುವುದನ್ನು ತಪ್ಪಿಸಲು ಹಾಗೂ ಮಧ್ಯಾಹ್ನ ಭೋಜನಕ್ಕೆ ಹೊರಗಡೆ ಹೋಗಿ ಬಳಿಕ ಕಲಾಪಕ್ಕೆ ಗೈರಾಗುವುದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದ್ದು, ಈ ಪರಿಪಾಠವನ್ನು ಕಳೆದ ಎರಡು ಮೂರು ಅಧಿವೇಶನಗಳಿಂದಲೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.
ಶಾಸಕರು ಭೋಜನದ ಬಳಿಕ ನಿದ್ರೆ ಮಾಡಲು ಹೊರಗೆ ಹೋಗುವುದನ್ನು ತಪ್ಪಿಸಲು ವಿಶ್ರಾಂತಿಗಾಗಿ ವಿಧಾನಸಭೆಯ ಮೊಗಸಾಲೆಯನ್ನೇ ರಿಕ್ಲೈನರ್ ಚೇರ್‌ಗಳ ವ್ಯವಸ್ಥೆ ಕಲ್ಪಿಸಲು ಸ್ಪೀಕರ್ ಖಾದರ್ ತೀರ್ಮಾನಿಸಿದ್ದಾರೆ.





