ಬೆಂಗಳೂರು: ಬೆಂಗಳೂರಿನ ಜಿಆರ್ ಫಾರ್ಮ್ ಹೌಸ್‌ನಲ್ಲಿ ತಡರಾತ್ರಿ 2 ಗಂಟೆವರೆಗೆ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದು, ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಾರ್ಟಿ ಆಯೋಜಕ ಸೇರಿದಂತೆ ಐವರನ್ನು ಬಂಧಿಸಲಾಗಿದೆ.
ದಾಳಿ ವೇಳೆ, 45ಗ್ರಾಂ ಡ್ರಗ್ಸ್, ಎಂಡಿಎಂಡಿ, ಕೊಕೆನ್ ಸೇರಿದಂತೆ ವಿವಿಧ ಬಗೆಯ ಮಾದಕ ವಸ್ತುಗಳು ಪೊಲೀಸರಿಗೆ ಸಿಕ್ಕಿವೆ. ಬರ್ತಡೆ ಹೇಸರಿನಲ್ಲಿ ಈ ಪಾರ್ಟಿಯನ್ನು ಆಯೋಜಿಸಿದ್ದು, ಪಾರ್ಟಿಯಲ್ಲಿ ಕೆಲವು ತೆಲಗು ನಟಿಯರು, ಮಾಡೆಲ್‌ಗಳು ಕೂಡ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ.
ಹೈದರಾಬಾದ್ ಮೂಲದ ವಾಸು ಎಂಬುವವರು ಜಿ.ಆರ್ ಫಾರ್ಮ್‌ಹೌಸ್‌ನಲ್ಲಿ ಪಾರ್ಟಿ ಆಯೋಜನೆ ಮಾಡಿದ್ದರು. ಈ ಪಾರ್ಟಿಯಲ್ಲಿ 30 ಮಹಿಳೆಯರು ೭೧ ಪುರುಷರು ಸೇರಿದಂತೆ ಒಟ್ಟು ೧೦೧ ಮಂದಿ ಭಾಗಿಯಾಗಿದ್ದರು. ಘಟನೆ ಸಂಬಂಧ ಐವರನ್ನ ಬಂಧಿಸಿದ್ದು, ಉಳಿದವರನ್ನು ಸ್ಥಳದಲ್ಲೇ ಮೆಡಿಕಲ್ ಚೆಕಪ್ ಮಾಡಿ, ರಕ್ತದ ಸ್ಯಾಂಪಲ್ ಪಡೆದು ಲ್ಯಾಬ್‌ಗೆ ಕಳುಹಿಸಲಾಗಿದೆ.
ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಎಫ್‌ಎಸ್‌ಎಲ್ ತಂಡ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ, ಅಗತ್ಯ ಸಾಕ್ಷ್ಯ ಸಂಗ್ರಹಿಸಿದೆ. ಕೆಲ ಮಾದಕವಸ್ತುಗಳನ್ನು ಟಾಯ್ಲೆಟ್ ನಲ್ಲಿ ಹಾಕಿ ನೀರುಹಾಕಿ ನಾಶ ಮಾಡಲು ಯತ್ನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ರೇವ್ ಪಾರ್ಟಿಯಲ್ಲಿ ಜನಪ್ರಿಯ ಡಿಜಿಎಗಳಾದ ರಾಬ್ಸ್, ಕಾಯ್ವಿ, ಬ್ಲಡಿ ಮಸ್ಕರಾ ಮುಂತಾದವರೂ ಭಾಗಿಯಾಗಿದ್ದರು ಎನ್ನಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ.