ಬೆಂಗಳೂರು : ವಿದೇಶದಿಂದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾ ರಾವ್‍ಗೂ ಕರ್ನಾಟಕ ರಾಜಕೀಯ ವ್ಯಕ್ತಿಗಳಿಗೂ ದೊಡ್ಡ ನಂಟಿರುವುದು ತನಿಖೆಯಿಂದ ಗೊತ್ತಾಗಿದೆ.
ರನ್ಯಾ ರಾವ್ ನಿರ್ದೇಶಕಿಯಾಗಿರುವ ಕಂಪನಿಗೆ ಕರ್ನಾಟಕ ಸರ್ಕಾರದಿಂದಲೇ 12 ಎಕರೆ ಜಮೀನು ಮಂಜೂರಾಗಿದೆ. ರನ್ಯಾ ಮತ್ತು ರಷಬ್ ಇಬ್ಬರು ಕೂಡ ಕಂಪನಿಯ ನಿರ್ದೇಶಕರು. ರನ್ಯಾ ಅವರ ಸೇರಿದೆ ಎನ್ನಲಾದ ಕ್ರಿಸೋರಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯ ನಿರ್ದೇಶಕಿಯಾಗಿದ್ದಾರೆ.
ಈ ಕಂಪನಿಗೆ 2023 ರಲ್ಲಿ ಕೆಐಎಡಿಬಿಯಿಂದ ಬರೋಬ್ಬರಿ 12 ಎಕರೆ ಜಮೀನು ಮಂಜೂರು ಮಾಡಲಾಗಿದೆ. ಸರ್ಕಾರ ಜಮೀನು ಮಂಜೂರು ಮಾಡಿರುವ ದಾಖಲೆಯಿದೆ. ಒಬ್ಬ ನಟಿ, ನಿರ್ದೇಶಕಿಯಾಗಿರುವ ಕಂಪನಿಗೆ 12 ಎಕರೆ ಜಮೀನು ಮಂಜೂರಾಗಿದ್ದು ಹೇಗೆ ಎಂಬ ಹತ್ತು ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ. ರನ್ಯಾ ರಾವ್ ಕಂಪನಿಗೆ ಫಟಾಫಟ್ ಭೂಮಿ ಮಂಜೂರಾಗಿದೆಯೇ ಎಂಬ ಗುಮಾನಿಯು ಮೂಡಿದೆ. ರಾಜಕಾರಣಿಯೊಬ್ಬರ ಕೃಪಾಕಟಾಕ್ಷದಿಂದ ಬರೋಬ್ಬರಿ 12 ಎಕರೆ ಕೆಐಎಡಿಬಿ ಲ್ಯಾಂಡ್ ಮಂಜೂರಾಗಿದೆ. ತುಮಕೂರಿನ ಶಿರಾದಲ್ಲಿ ಸ್ಟೀಲ್ ಕಂಪನಿಗೆ ಜಮೀನು ಮಂಜೂರಾಗಿದೆ.
ಕಂಪನಿ ಸ್ಥಾಪನೆಯಾದ 9 ತಿಂಗಳಲ್ಲೇ ಸರ್ಕಾರ ಭೂಮಿ ಕೊಟ್ಟಿದೆ. 2022ರ ಏಪ್ರಿಲ್‍ನಲ್ಲಿ ಕಂಪನಿ ಸ್ಥಾಪನೆಯಾಯಿತು. 2023 ಜನವರಿಯಲ್ಲಿ ಭೂಮಿ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ರನ್ಯಾ ರಾವ್‍ಗಾಗಿ ಫೈಲ್ ಸ್ಪೀಡ್ ಅಪ್ ಆಗಿದ್ಯಾ? ರನ್ಯಾ ಹಿಂದಿರುವ ಆ ರಾಜಕಾರಣಿ ಯಾರು ಎಂಬ ಪ್ರಶ್ನೆ ಮೂಡಿದೆ.
ಏನಿದು ಪ್ರಕರಣ?
ದುಬೈನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಮಾ.3ರ ಸೋಮವಾರ ರಾತ್ರಿ 7 ಗಂಟೆ ಸುಮಾರಿಗೆ ಬಂದಿಳಿದ ನಟಿ ರನ್ಯಾ ರಾವ್ ಅವರನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ತಪಾಸಣೆ ಮಾಡಿದಾಗ 12 ಕೋಟಿ ರೂ ಮೌಲ್ಯದ 14.8ಕೆ.ಜಿ ತೂಕದ ಚಿನ್ನದ ಬಿಸ್ಕತ್ತುಗಳು ಪತ್ತೆಯಾಗಿದ್ದವು. ಒಟ್ಟಾರೆ ನಟಿ ರನ್ಯಾ ಅವರಿಂದ 17.16 ಕೋಟಿ ಮೌಲ್ಯದ ವಸ್ತುಗಳು ಪತ್ತೆಯಾಗಿ, ಅವುಗಳನ್ನು ವಶಕ್ಕೆ ಪಡೆದ ಡಿಆರ್‌ಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು. ಅಲ್ಲದೇ, ಇದೀಗ ಈ ಪ್ರಕರಣದಲ್ಲಿ ಸಿಬಿಐ ಸಹ ಎಂಟ್ರಿಯಾಗಿದೆ.





