ಮೈಸೂರು: ಅಯೋಧ್ಯೆಯಲ್ಲಿ ಇದೇ ಜನವರಿ 22 ರಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯಲಿದೆ.
ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾ ಮೂರ್ತಿಯನ್ನು ಮೈಸೂರಿನ ಹಾರೋಹಳ್ಳಿ ಗ್ರಾಮದಲ್ಲಿ ಸಿಕ್ಕ ಕಪ್ಪು ಶಿಲೆಯಿಂದ ನಿರ್ಮಿಸಲಾಗಿದೆ. ಈ ಶಿಲೆ ಸಿಕ್ಕ ಸ್ಥಳದಲ್ಲಿ ಶ್ರೀರಾಮನ ದೇವಾಲಯವನ್ನು ನಿರ್ಮಿಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಹೇಳಿದ್ದಾರೆ.
ಬಾಲರಾಮನ ಮೂರ್ತಿ ಕೆತ್ತನೆಗೆ ಬಳಸಲಾದ ಕಪ್ಪುಶಿಲೆ ಸಿಕ್ಕ ಜಾಗದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡುತ್ತೇವೆ. ರಾಮಮಂದಿರ ಉದ್ಘಾಟನಾ ದಿನದಂದೇ ಹಾರೋಹಳ್ಳಿಯಲ್ಲಿ ರಾಮ ಮಂದಿರ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಗಳನ್ನು ನೆರವೇರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ನಮ್ಮ ಕ್ಷೇತ್ರದ ಗ್ರಾಮದಲ್ಲೇ ಕೃಷ್ಣ ಶಿಲೆ ಸಿಕ್ಕಿದೆ. ಆ ಶಿಲೆಯಿಂದ ಮೂಡಿಬಂದ ಶ್ರೀರಾಮ ಮೂರ್ತಿ ದರ್ಶನ ಪ್ರಪಂಚದಾದ್ಯಂತ ಶಾಶ್ವತವಾಗಿದೆ. ಇಂತಹ ಅವಕಾಶ ಲಭಿಸಿರುವುದಕ್ಕೆ ನಾನು ಸೌಭಾಗ್ಯವಂತ ಎಂದು ಜಿಟಿಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಜಾಗ ಸಿಕ್ಕ ಸ್ಥಳದ 4 ಗುಂಟೆ ಜಮೀನನ್ನು ಮಂದಿರ ನಿರ್ಮಾಣಕ್ಕೆ ಸಂತೋಷದಿಂದ ಕೊಡುವುದಾಗಿ ಜಮೀನು ಮಾಲೀಕ ರಾಮದಾಸ್ ಹೇಳಿದ್ದಾರೆ. ಜಮೀನಿನ ಮಾಲೀಕ ದಲಿತ ಸಮುದಾಯದವರು. ಇವರು ರಾಮಮಂದಿರಕ್ಕೆ ಸ್ಥಳ ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಅಯೋಧ್ಯೆ ಶ್ರೀರಾಮಮಂದಿರ ಉದ್ಘಾಟನೆ ದಿನದಂದೇ ಮೈಸೂರಿನಲ್ಲಿ ಶಿಲೆ ಸಿಕ್ಕ ಜಾಗದಲ್ಲಿ ಭೂಮಿಪೂಜೆ ಮಾಡಲಾಗುವುದು. ಮೂರ್ತಿ ಕೆತ್ತನೆಗೆ ಅರುಣ್ ಯೋಗಿರಾಜ್ ಅವರನ್ನೇ ಸಂಪರ್ಕಿ, ಅವರ ನಿರ್ದೇಶನದಂತೆಯೇ ನಡೆಯುತ್ತೇವೆ. ರಾಮಲಲ್ಲಾ ವಿಗ್ರಹಕ್ಕೆ ಶಿಲೆ ಸಿಕ್ಕ ಜಮೀನು ಮಾಲೀಕ, ಶೀಲೆ ಹೊರ ತೆಗೆದ ಶ್ರೀನಿವಾಸ್ ಮತ್ತು ಜೊತೆಗಾರರನ್ನು ಅಯೋಧ್ಯೆಗೆ ಕಳುಹಿಸುತ್ತೇವೆ ಎಂದು ಶಾಸಕ ಜಿಟಿ ದೇವೆಗೌಡ ಹೇಳಿದ್ದಾರೆ.