Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಮಳೆ..ಮಳೆ..ಮಳೆ: ರಾಜ್ಯದಲ್ಲಿ 29 ತಾಲೂಕುಗಳಲ್ಲಿ ಭೂಕುಸಿತದ ಭೀತಿ…!

ಮೈಸೂರು: ಕೇರಳದ ವಯನಾಡಿನಲ್ಲಿ ಸಂಭವಿಸಿರುವ ಭೂಕುಸಿತದಲ್ಲಿ ಸಾವಿನ ಸಂಖ್ಯೆ 270ಕ್ಕೆ ಏರಿದ್ದು, ನಾಪತ್ತೆಯಾದವರ ಹುಡುಕಾಟ ಸಮರೋಪಾದಿಯಲ್ಲಿ ಸಾಗುತ್ತಿದೆ. ಈ ಮಧ್ಯೆ ಇದೇ ರೀತಿಯಲ್ಲಿ ರಾಜ್ಯದ ಮಲೆನಾಡು ಹಾಗೂ ಇತರೆ ಭಾಗಗಳ 29 ತಾಲೂಕಿನ ಹಲವು ಭಾಗಗಳಲ್ಲಿ ಭೂಕುಸಿತ ಸಂಭವಿಸುವ ಅಪಾಯವಿದೆ.

ರಾಜ್ಯ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಮುಂಜಾಗ್ರತಾ ಕ್ರಮ ಕೈಗೊಳ್ಳದಿದ್ದರೆ ಭಾರೀ ಪ್ರಮಾಣದ ಆಪತ್ತು ಎದುರಾಗುವ ಭೀತಿ ಉಂಟಾಗಲಿದೆ.

ಮಳೆಗಾಲ ಸಮಯದಲ್ಲಿನ ಭೂಕುಸಿತ ತಡೆಯಲು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರವು 2022ರಲ್ಲಿಭೂಕುಸಿತ ನಿರ್ವಹಣೆಗಾಗಿ ಕ್ರಿಯಾಯೋಜನೆ ರೂಪಿಸಿತ್ತು. ಆದರೆ, ಕ್ರಿಯಾಯೋಜನೆವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದ ಪರಿಣಾಮ 2022ರಲ್ಲೇ ಭಾರೀ ಮಳೆಯಿಂದಾಗಿ ರಾಜ್ಯದ 55 ಕಡೆ ಭೂಕುಸಿತ ಸಂಭವಿಸಿತು. ಈ ಬಾರಿ ಮಳೆಯಿಂದ 16ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಗುಡ್ಡ ಮತ್ತು ಭೂಕುಸಿತ ಉಂಟಾಗಿದೆ. ಅಲ್ಲದೆ, ಭೂಕುಸಿತ ನಿರ್ವಹಣೆಗಾಗಿ ರೂಪಿಸಿದ್ದ ಕ್ರಿಯಾಯೋಜನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ 29 ತಾಲೂಕಿನ ಹಲವೆಡೆ ಭೂಕುಸಿತ ಪ್ರಮಾಣ ಹೆಚ್ಚುವ ಆತಂಕವಿದೆ.

ರಾಜ್ಯದಲ್ಲಿ 13 ವರ್ಷಗಳಲ್ಲಿ 1,272 ಭೂಕುಸಿತ
ರಾಜ್ಯ ವಿಪತ್ತು ಪ್ರಾಧಿಕಾರದ ಮಾಹಿತಿಯಂತೆ 2009ರ ಜನವರಿಯಿಂದ 2021ರ ಡಿಸೆಂಬರ್ ವರೆಗೆ ರಾಜ್ಯದಲ್ಲಿ 1,272 ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಅದರಲ್ಲೂ ಉತ್ತರ ಕನ್ನಡ, ಶಿವಮೊಗ್ಗ, ಕೊಡಗು ಭಾಗದಲ್ಲಿ ಭೂಕುಸಿತದ ಪ್ರಮಾಣ ಹೆಚ್ಚಾಗಿದೆ.

ಭೂಕುಸಿತಕ್ಕೆ ಕಾರಣಗಳು
ಕಡಿದಾದ ಗುಡ್ಡಗಳಲ್ಲಿ ತೆಳುವಾದ ಮಣ್ಣಿನ ಹೊದಿಕೆ, ಇಳಿಜಾರು ಪ್ರದೇಶದ ಭೂ ಸ್ವರೂಪದಲ್ಲಿ ಬದಲಾವಣೆ, ಭಾರೀ ಮಳೆ, ನೈಸರ್ಗಿಕವಾಗಿ ನೀರು ಹರಿಯುವಿಕೆಗೆ ತಡೆ, ಇಳಿಜಾರು ಪ್ರದೇಶದಲ್ಲಿ ಭಾರೀ ಪ್ರಮಾಣದ ನೀರು ಹರಿಯುವುದು, ಅರಣ್ಯ ನಾಶದಿಂದ ಭೂಕುಸಿತ ಸಂಭವಿಸುತ್ತದೆ.

ಭೂಕುಸಿತ ಭೀತಿ ಇರುವ ಜಿಲ್ಲೆ ಹಾಗೂ ತಾಲೂಕುಗಳು
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಹೊನ್ನಾವರ, ಕಾರವಾರ, ಕುಮಟಾ, ಶಿರಶಿ,ಸೂಪಾ, ಸಿದ್ದಾಪುರ, ಸೂಪ ಹಾಗೂ ಯಲ್ಲಾಪುರ, ಉಡುಪಿ ಜಿಲ್ಲೆಯ ಹೆಬ್ರಿ, ಬೈಂದೂರು, ಕಾರ್ಕಳ ಹಾಗೂ ಕುಂದಾಪುರ, ಶಿವಮೊಗ್ಗ ಜಿಲ್ಲೆಯ ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ, ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಚಿಕ್ಕಮಗಳೂರು, ಶೃಂಗೇರಿ, ಎನಆರ್‌ ಪುರ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಕಡಬ, ಸುಳ್ಯಾ, ಪುತ್ತೂರು ಹಾಗೂ ಹಾಸನ ಜಿಲ್ಲೆಯ ಸಕಲೇಶಪುರ

Tags: