ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿರುವವರ ಡಿಜಿಟಲ್ ಪ್ರತಿ ಹಾಗೂ ಮತದಾನವನ್ನು ವಿಡಿಯೋ ಚಿತ್ರೀಕರಣ ಮಾಡಿರುವ ದೃಶ್ಯಾವಳಿಗಳನ್ನು ಒದಗಿಸಿದರೆ, ಕೇಂದ್ರದ ಬಿಜೆಪಿ ಸರ್ಕಾರ ಹೇಗೆ ಕಳ್ಳತನದ ಮೂಲಕ ಅಧಿಕಾರ ಹಿಡಿದಿದೆ ಎಂದು ತಾವು ಸಾಬೀತು ಪಡಿಸುವುದಾಗಿ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‍ಗಾಂಧಿ ಸವಾಲು ಹಾಕಿದ್ದಾರೆ.
ಮತಗಳ್ಳತನ ವಿರುದ್ಧ ನಗರದ ಫ್ರೀಡಂಪಾರ್ಕ್‍ನಲ್ಲಿ ಕಾಂಗ್ರೆಸ್ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಮತಗಳ್ಳತನದ ಮೂಲಕ ಲೋಕಸಭಾ ಕ್ಷೇತ್ರ ಮತಗಳನ್ನು ಕಳವು ಮಾಡಿ ಬಿಜೆಪಿ ಗಂಭೀರ ಸ್ವರೂಪದ ಅಪರಾಧ ಮಾಡಿದೆ. ಇದಕ್ಕೆ ಕೇಂದ್ರ ಚುನಾವಣಾ ಆಯೋಗ ಸಹಕಾರ ನೀಡಿದೆ ಎಂದು ಟೀಕಿಸಿದರು.
ಚುನಾವಣೆಯಲ್ಲಿ ಮತದಾನ ಮಾಡಿರುವವರ ಪಟ್ಟಿಯನ್ನು ಡಿಜಿಟಲ್ ಸ್ವರೂಪದಲ್ಲಿ ನೀಡಬೇಕು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಒದಗಿಸುವಂತೆ ಮೊದಲಿನಿಂದಲೂ ಕೇಳುತ್ತಿದ್ದೇವೆ. ಇದು ನಮಗೆ ಸಿಕ್ಕರೆ ಯಾವ ರೀತಿ ಮತಗಳ್ಳತನವಾಗಿದೆ ಎಂದು ನೂರಕ್ಕೆ ನೂರರಷ್ಟು ಸಾಬೀತು ಪಡಿಸಲು ಸಿದ್ದ. ಕಳೆದ ಲೋಕಸಭಾ ಚುನಾವಣೆಯದಷ್ಟೇ ಅಲ್ಲ ಹಿಂದಿನ 10 ವರ್ಷಗಳಲ್ಲಿ ನಡೆದಿರುವ ಮತದಾನದ ಡಿಜಿಟಲ್ ಪಟ್ಟಿ ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಆಯೋಗ ನೀಡಬೇಕೆಂದು ರಾಹುಲ್‍ಗಾಂಧಿ ಆಗ್ರಹಿಸಿದರು
ಬೆಂಗಳೂರಿನ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿನ ಮತಗಳ್ಳತನದ ಬಗ್ಗೆ ಆಧ್ಯಯನ ನಡೆಸಿ ಸತ್ಯಾಂಶವನ್ನು ಪತ್ತೆಹಚ್ಚಲು ನಮಗೆ 6 ತಿಂಗಳ ಸಮಯ ಹಿಡಿಯಿತು. ಆಯೋಗ ಡಿಜಿಟಲ್ ದತ್ತಾಂಶಗಳನ್ನು ನೀಡದೆ ಇದ್ದರೇ, ನಾವು ಸುಮನೆ ಕೂರುವುದಿಲ್ಲ. ದೇಶಾದ್ಯಂತ 34 ಸಾವಿರಗಿಂತಲೂ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸಿರುವ ಬಿಜೆಪಿಯ 25 ಕ್ಷೇತ್ರಗಳಲ್ಲೂ ಅಧ್ಯಯನ ಮಾಡುತೇವೆ. ಯಾರನ್ನೂ ಬಿಡುವುದಿಲ್ಲ ಒಬ್ಬೊಬ್ಬರನ್ನಾಗಿ ಹುಡುಕಿ ಹೊರ ತೆಗೆಯುತ್ತೇವೆ ಎಂದು ರಾಹುಲ್‍ಗಾಂಧಿ ಸವಾಲು ಹಾಕಿದರು.
ಲೋಕಸಭೆ ಚುನಾವಣೆಯ ವೇಳೆ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿ ಕೂಟ ಹೆಚ್ಚು ಮತಗಳನ್ನು ಪಡೆದಿತ್ತು. 4 ತಿಂಗಳ ಅಂತರದಲ್ಲೇ ನಡೆದ ಮಹಾರಾಷ್ಟ್ರ ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಈ ಹಿಂದೆ ಪಡೆದಷ್ಟೇ ಮತಗಳನ್ನೇ ಪಡೆದಿದ್ದವು. ಆದರೆ 4 ತಿಂಗಳ ಅಂತರದಲ್ಲಿ 1 ಕೋಟಿ ಹೆಚ್ಚುವರಿ ಮತದಾರರನ್ನು ಸೇರ್ಪಡೆ ಮಾಡಲಾಗಿದೆ. ಆ ಮತಗಳು ಬಿಜೆಪಿಗೆ ಚಲಾವಣೆಯಾಗಿವೆ ಎಂದು ಆರೋಪಿಸಿದರು.
ಕರ್ನಾಟಕದ ಲೋಕಸಭಾ ಕ್ಷೇತ್ರಗಳಲ್ಲಿ 16 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾಗಿ ಕಾಂಗ್ರಸ್‍ನ ಆಂತರಿಕ ಸಮೀಕ್ಷೆ ಹೇಳಿತ್ತು. ಆದರೆ 9ರಲ್ಲಿ ಮಾತ್ರ ಗೆದ್ದಿದ್ದೇವೆ. ಅಲ್ಲಿಂದ ಅನುಮಾನಗಳು ಆರಂಭಗೊಂಡು ಪ್ರಶ್ನೆ ಕೇಳಲಾರಂಬಿಸಿದೆವು. ತಕ್ಷಣವೇ ಕಾನೂನು ತಿದ್ದುಪಡಿ ಮಾಡಿ 45 ದಿನಗಳಲ್ಲೇ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಾವಳಿಗಳನ್ನು ಅಳಸಿಹಾಕಲಾಗಿವೆ ಎಂದು ಕಿಡಿ ಕಾರಿದರು.
ಮಹದೇವಪುರ ಕ್ಷೇತ್ರದ ಅಧ್ಯಯನದ ಪ್ರಕಾರ 6 ಮತಗಳಲ್ಲಿ 1 ಮತ ಕಳ್ಳತನವಾಗಿದೆ. 5 ಮಾದರಿಗಳಲ್ಲಿ ಮತದಾರರ ಪಟ್ಟಿಯಲ್ಲಿ ಅಕ್ರಮಗಳಾಗಿವೆ. ಆರೂವರೆ ಲಕ್ಷ ಮತಗಳ ಪೈಕಿ ಒಂದೂವರೆ ಲಕ್ಷ ಮತ ನಕಲಿಯಾಗಿವೆ. ತಾವು ಈ ಆರೋಪ ಮಾಡಿದಕ್ಕೆ ಆಯೋಗ ಪ್ರಮಾಣ ಪತ್ರ ಸಲ್ಲಿಸುವಂತೆ ಕೇಳುತ್ತಿದೆ. ನಾನು ಸಂಸದನಾಗಿ ಸಂಸತ್ ಒಳಗೆ ಸಂವಿಧಾನ ಹಿಡಿದು ಪ್ರಮಾಣ ಮಾಡಿದ್ದೇನೆ. ಹೇಳುವುದೆಲ್ಲವೂ ಸತ್ಯವಾಗಿದೆ ಎಂದರು.
ನಿನ್ನೆ ತಮ ಪತ್ರಿಕಾಗೋಷ್ಠಿಯ ಬಳಿಕ ಚುನಾವಣಾ ಆಯೋಗ ಮಧ್ಯಪ್ರದೇಶ, ರಾಜಸ್ಥಾನ, ಬಿಹಾರದಲ್ಲಿನ ವೆಬ್‍ಸೈಟ್‍ಗಳನ್ನು ಸ್ಥಗಿತಗೊಳಿಸಿದೆ. ದೇಶದ ಜನ ವೆಬ್‍ಸೈಟ್‍ನಲ್ಲಿರುವ ದತ್ತಾಂಶಗಳನ್ನು ಪರಿಶೀಲಿಸಿ ಪ್ರಶ್ನೆ ಕೇಳಲಾರಂಭಿಸುವುದರ ಭಯ ಅವರನ್ನು ಕಾಡುತ್ತಿದೆ. ಎಂದರು.
25 ಕ್ಷೇತ್ರಗಳಲ್ಲಿ ಕಡಿಮೆ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರಿಂದ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ. ಅವುಗಳಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಗಳಲ್ಲಿ ಮತಗಳ್ಳತನವಾಗಿ ಒಂದು ಸ್ಥಾನದ ಗೆಲುವು ಕಳ್ಳಮಾರ್ಗದಿಂದ ಎಂದು ನಾವು ಪತ್ತೆ ಹಚ್ಚಿದ್ದೇವೆ. ಆಯೋಗ ಎಲೆಕ್ಟ್ರಾನಿಕ್ ದತ್ತಾಂಶಗಳನ್ನು ನೀಡಿದರೆ 25 ಕ್ಷೇತ್ರಗಳಲ್ಲೂ ಕಳ್ಳತನ ಮಾಡಲಾಗಿದೆ. ಮೋದಿ ಅಕ್ರಮವಾಗಿ ಪ್ರಧಾನಿಯಾಗಿದ್ದಾರೆ ಎಂದು ನಾನು ಸಾಬೀತು ಪಡಿಸುತ್ತೇನೆ. ಅದರೆ ಆಯೋಗ ದತ್ತಾಂಶ ನೀಡದಿರುವುದೇಕೆ ಎಂದು ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕನಾಗಿ ಇದು ನನ್ನೊಬ್ಬನ ಧ್ವನಿಯಲ್ಲ. ಎಲ್ಲಾ ವಿರೋಧ ಪಕ್ಷಗಳನ್ನು ಕೇಳುತ್ತಿವೆ. ತಾವು ಒಂಟಿಯಲ್ಲ ಎಂದ ಅವರು ಆಯೋಗದ ಆಧಿಕಾರಿಗಳು ದತ್ತಾಂಶಗಳನ್ನು ಮುಚ್ಚಿಡುವ ಮೂಲಕ ಅಪರಾಧವನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಇದನ್ನು ಬಯಲಿಗೆ ತರುತ್ತೇವೆ. ಆಯೋಗದ ಅಧಿಕಾರಿಗಳು ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.





