ಬೆಂಗಳೂರು: ಕರ್ನಾಟಕಕ್ಕೆ ಬರಲು ರಾಹುಲ್ ಗಾಂಧಿ ಮುಜುಗರ ಪಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ಇಂದಿನಿಂದ ಆರಂಭವಾಗಲಿರುವ ಇನ್‌ವೆಸ್ಟ್ ಕರ್ನಾಟಕ 2025 ಹೂಡಿಕೆ ಸಮಾವೇಶಕ್ಕೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಗೈರಾಗಿದ್ದಾರೆ.
ಈ ಬಗ್ಗೆ ಲೇವಡಿ ಮಾಡಿರುವ ಆರ್.ಅಶೋಕ್ ಅವರು, ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಸತತ ಮೂರನೇ ಸಲವೂ ಶೂನ್ಯ ಸಾಧನೆ ಮಾಡಿ ಅವಮಾನಗೊಂಡಿರುವುದಕ್ಕೆ ರಾಹುಲ್ ಗಾಂಧಿ ಅವರು ಕರ್ನಾಟಕಕ್ಕೆ ಬರಲು ಮುಜುಗರ ಪಡುತ್ತಿದ್ದಾರೆಯೇ? ಅಥವಾ ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಗುಂಪುಗಾರಿಕೆಯನ್ನು ಎದುರಿಸಲು ರಾಹುಲ್ ಹೆದರುತ್ತಿದ್ದಾರೆಯೇ ಎಂದು ಲೇವಡಿ ಮಾಡಿದ್ದಾರೆ.
ಡಿಸಿಎಂ ಡಿಕೆಶಿ ಅವರಿಗಿಂತ ಗಾಂಧಿ ಕುಟುಂಬದವರು ಯಾವಾಗಲೂ ಸಿಎಂ ಸಿದ್ದರಾಮಯ್ಯ ಅವರತ್ತ ಒಲವು ತೋರಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಅದು ಎಲ್ಲರಿಗೂ ತಿಳಿದಿದೆ. ರಾಹುಲ್ ಗಾಂಧಿ ಹಾಗೂ ಡಿಕೆಶಿ ಒಬ್ಬರನ್ನೊಬ್ಬರು ನೋಡುತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು.





