ವಿಜಯಪುರ: ಇಸ್ಪೀಟ್ ಆಡುತ್ತಿದ್ದ ಗುಂಪಿನ ಮೇಲೆ ಪೊಲೀಸರು ಇಂದು(ಜು.2) ಸಂಜೆ ದಾಳಿ ನಡೆಸಿದ್ದು, ದಾಳೆ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲಿದ್ದ ನದಿಯಲ್ಲಿ ತೆಪ್ಪ ಏರಿ ಹೊರಟ 6 ಮಂದಿ ನೀರುಪಾಲಾದ ಘಟನೆ ಕೃಷ್ಣ ನದಿ ತೀರದಲ್ಲಿ ನಡೆದಿದೆ.
ವಿಜಯಪುರ ಜಿಲ್ಲೆಯ ಕೊಲ್ಹಾರ ತಾಲೂಕಿನ ನಿವಾಸಿಗಳಾದ ಮಹಿಬಾಬ್ ವಾಲಿಕಾರ(30) ತಯ್ಯಬ್ ಚೌಧರಿ(42) ರಫೀಕ್ ಜಾಲಗಾರ(55) ಪುಂಡಲೀಕ ಮಲ್ಲಪ್ಪ ಯಂಕಂಚಿ(36) ಧಶರಥ ಗೌಡ(66) ನೀರುಪಾಲಾಗಿ ಸಾವಿಗೀಡಾದವರು. ಸಾವಿಗೀಡಾದ ಇನ್ನೊಬ್ಬರ ಹೆಸರು ತಿಳಿದುಬಂದಿಲ್ಲ. ಪೊಲೀಸರು, ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರ ಸಾಹಾಯದೊಂದಿಗೆ ಶವಗಳ ಪತ್ತೆ ಕಾರ್ಯಾಚರಣೆ ನಡೆಸಿದ್ದಾರೆ. ವಿಷಯ ತಿಳಿದು ಎಸ್ಪಿ ಹಾಗೂ ಎಎಸ್‌ಪಿ ಸ್ಥಳಕ್ಕೆ ದೌಡಯಿಲಿ ಪರಿಶೀಲನೆ ನಡೆಸಿದ್ದಾರೆ.
ಆರೇಳು ಮಂದಿ ಗುಂಪೊಂದು ಕೃಷ್ಣ ನದಿ ತೀರದಲ್ಲಿ ಇಸ್ಪೀಟ್ ಆಡುತ್ತಿರುವ ಮಾಹಿತಿ ತಿಳಿದ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳು ಆರೋಪಿಗಳು ಪಕ್ಕದಲ್ಲಿದ್ದ ತೆಪ್ಪ ಏರಿದ್ದಾರೆ. ಆದರೆ, ನದಿಯಲ್ಲಿ ಸ್ಪಲ್ಪ ದೂರ ಹೋಗುತ್ತಿದ್ದಂತೆ ಜೋರಾಗಿ ಬೀಸಿದ ಗಾಳಿಗೆ ತೆಪ್ಪ ನದಿಯಲ್ಲಿ ಮುಗುಚಿ ಬಿದ್ದಿದೆ. ಪರಿಣಾಮ ಆರು ಜನರು ಜಲಸಮಾಧಿಯಾಗಿದ್ದು, ಇನ್ನಿಬ್ಬರು ಈಜಿಕೊಂಡು ದಡ ಸೇರಿದ್ದಾರೆ.
ಒಟ್ಟಿನಲ್ಲಿ ಇಸ್ಪೀಟ್ ಆಡಲು ಹೋದವರು ದುರಂತ ಅಂತ್ಯ ಕಂಡಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.