ಬೆಂಗಳೂರು: ಅಧಿಕಾರಿಗಳನ್ನು ತರಾಟೆ ತೆಗೆದುಕೊಳ್ಳುವ ಮೊದಲು ನಿಮ್ಮ ಸಚಿವ ಸಂಪುಟ ಸಚಿವರಿಗೆ ನಿಮ್ಮ ಮಾತು, ಆದೇಶ ಪಾಲನೆ ಮಾಡುವಂತೆ ಕ್ಲಾಸ್ ತೆಗೆದುಕೊಂಡು ತಾಕೀತು ಮಾಡಿ. ಕೆಲಸ ಮಾಡದ ಸೋಮಾರಿ ಸಚಿವರನ್ನು ಸಂಪುಟದಿಂದ ಕಿತ್ತು ಬಿಸಾಕಿ ಸಮರ್ಥರನ್ನು ತೆಗೆದುಕೊಳ್ಳಿ ಎಂದು ಪ್ರತಿಪಕ್ಷ ನಾಯಕ ಆರ್ ಆಶೋಕ್, ಸಿಎಂ ಸಿದ್ದರಾಮಯ್ಯರಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ನಿರ್ಗಮಿತ ಸಿಎಂ ಸಿದ್ದರಾಮಯ್ಯ ಅವರು ಡಿಸಿ, ಸಿಇಒಗಳ ಸಭೆಯಲ್ಲಿ ಅಧಿಕಾರಿಗಳಿಗೆ ತಮ್ಮ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎನ್ನುವ ಸುದ್ದಿ ಕಾಂಗ್ರೆಸ್ ಸರ್ಕಾರದಲ್ಲಿ ಆಡಳಿತ ಯಂತ್ರ ಹೇಗೆ ಸಂಪೂರ್ಣವಾಗಿ ಹಳಿ ತಪ್ಪಿದೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇಷ್ಟಕ್ಕೂ ಸಚಿವ ಸಂಪುಟ ವಿಸ್ತರಣೆ ಮಾಡಬೇಕು ಎಂಬ ನಿಮ್ಮ ಬೇಡಿಕೆಗೆ ಹೈಕಮಾಂಡ್ ಯಾಕೆ ಸೊಪ್ಪು ಹಾಕುತ್ತಿಲ್ಲ? ಇದು ತಾವು ನಿರ್ಗಮಿತ ಸಿಎಂ ಎಂಬುದಕ್ಕೆ ಪರೋಕ್ಷ ಸೂಚನೆಯೋ? ಅಥವಾ ಹೇಗಿದ್ದರೂ ಮುಖ್ಯಮಂತ್ರಿ ಬದಲಾವಣೆ ಆಗಲಿದೆ, ಈಗ ಸಂಪುಟ ವಿಸ್ತರಣೆ/ಪುನರ್‌ರಚನೆ ಯಾಕೆ ಎಂದು ಸುಮ್ಮನಿದ್ದಾರೋ? ಎಂದು ಪ್ರಶ್ನೆ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯನವರೇ, ಬಡವನ ಕೋಪ ದವಡೆಗೆ ಮೂಲ ಎನ್ನುವಂತೆ ತಮ್ಮ ಕೋಪ-ತಾಪ, ರೋಷಾವೇಷ ಅಧಿಕಾರಿಗಳ ಮೇಲಲ್ಲ, ಸಚಿವ ಸಂಪುಟದ ಸದಸ್ಯರ ಮೇಲೆ ತೋರಿಸಿ. ನಿಮ್ಮ ಹತಾಶೆಯನ್ನು, ಅಸಹಾಯಕತೆಯನ್ನ ಅಧಿಕಾರಿಗಳ ಮೇಲಲ್ಲಾ, ತಮ್ಮ ಮಾತಿಗೆ ನಯಾ ಪೈಸೆ ಬೆಲೆ ಕೊಡದ ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಕ್ಲಾಸ್ ತೆಗೆದುಕೊಂಡು ನಿಮ್ಮ ದಮ್ಮು ತಾಕತ್ತು ತೋರಿಸಿ ಎಂದು ಸವಾಲು ಎಸೆದಿದ್ದಾರೆ.
ಮನೆಯ ಯಜಮಾನ ಸರಿ ಇಲ್ಲದೆ ಹೋದರೆ ಹೇಗೆ ಸಂಸಾರ ಬೀದಿಗೆ ಬರುತ್ತದೋ ಅದೇ ರೀತಿ ಒಂದು ಸರ್ಕಾರದಲ್ಲಿ ಮುಖ್ಯಮಂತ್ರಿಗೆ ಹಿಡಿತ ಇಲ್ಲದೆ ಹೋದರೆ ಆಡಳಿತ ಯಂತ್ರ ಹಳ್ಳ ಹಿಡಿಯುತ್ತದೆ. ಮುಖ್ಯಮಂತ್ರಿ ಮಾತಿಗೆ ಸಚಿವರೇ ಕಿಮ್ಮತ್ತು ಕೊಡುತ್ತಿಲ್ಲ ಎಂದರೆ ಆಡಳಿತಶಾಹಿಯಲ್ಲಿ ಗೊಂದಲ ಮೂಡಿಸುತ್ತದೆ ಎಂದು ಟೀಕಿಸಿದ್ದಾರೆ.





