Mysore
28
few clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ಅಪ್ಪಂದಿರ ದಿನಾಚರಣೆ ಪ್ರಯುಕ್ತ ಹಾಡು ಬರೆದ ಪ್ರತಿಪಕ್ಷ ನಾಯಕ ಆರ್‌.ಅಶೋಕ

ಬೆಂಗಳೂರು : ಅಪ್ಪನ ಪ್ರೀತಿಯನ್ನು ಸ್ಮರಿಸುವ ನಿಟ್ಟಿನಲ್ಲಿ ಹಾಡು ಬರೆಯಲಾಗಿದೆ. ಇದರಲ್ಲಿ ನನ್ನ ಭಾವನೆಗಳನ್ನು ಕೂಡ ಬರೆದುಕೊಟ್ಟಿದ್ದೇನೆ. ಅದನ್ನು ಹಾಡಾಗಿ ಬಿಡುಗಡೆ ಮಾಡಲಾಗಿದೆ. ಈ ಹಾಡನ್ನು ಕೇಳಿ ಎಲ್ಲರೂ ಅಪ್ಪನ ಬಳಿ ಪ್ರೀತಿಯನ್ನು ಹಂಚಿಕೊಳ್ಳಿ. ಈ ಹಾಡನ್ನು ನನ್ನ ತಂದೆ ಸೇರಿದಂತೆ ಎಲ್ಲ ತಂದೆಯರಿಗಾಗಿ ಬರೆದಿದ್ದೇನೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಅಪ್ಪಂದಿರ ದಿನಾಚರಣೆ ಪ್ರಯುಕ್ತ, ಜೆಎಸ್‌ಎಸ್‌ ಎಜುಕೇಶನ್‌ ಕಾಂಪ್ಲೆಕ್ಸ್‌ನಲ್ಲಿ ನಡೆದ, “ನಿಜನಾಯಕ ಅಪ್ಪ” ಕನ್ನಡ ಭಾವ ಚಿತ್ರಗೀತೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ತಂದೆ ಎಂದರೆ ಮನೆಯ ಆಧಾರಸ್ತಂಭ. ಸಂಸಾರದ ಗಾಡಿಯನ್ನು ಎಳೆಯುವ ಯೋಗಿ. ತಂದೆ ಇಡೀ ಸಂಸಾರವನ್ನು ನಿಭಾಯಿಸುತ್ತಾರೆ. ಮಕ್ಕಳು ಕೇಳುವ ಪಾಕೆಟ್‌ ಮನಿಯನ್ನು ಅಪ್ಪ ಕೊಡಲೇಬೇಕಾಗುತ್ತದೆ. ಹೆಂಡತಿಗೆ ಮನೆ ನಡೆಸಲು ಹಣ ನೀಡಲೇಬೇಕಾಗುತ್ತದೆ. ಇಡೀ ಸಂಸಾರವನ್ನು ನಡೆಸುವ ನಾವಿಕ, ಮನೆಯ ಕಾವಲುಗಾರನೇ ಅಪ್ಪ ಎಂದರು.

ಹಿಂದೆ ನಮ್ಮೂರಿನಲ್ಲಿ ಸ್ಥಳೀಯರ ನಡುವೆ ಜಗಳವಾಗಿತ್ತು. ಸ್ಥಳೀಯರು ನನ್ನನ್ನು ಕರೆಯಲು ಮನೆಗೆ ಬಂದಿದ್ದರು. ಆದರೆ ಅಪ್ಪ ನನ್ನನ್ನು ಹೊರಗೆ ಬಿಟ್ಟಿರಲಿಲ್ಲ. ಅಂದು ನಾನೇನಾದರೂ ಹೊರಗೆ ಹೋಗಿದ್ದರೆ, ಅವರ ಜೊತೆಗೆ ಸೇರಿ ಅಪರಾಧಿಯಾಗುತ್ತಿದ್ದೆ. ನಾನು ಈ ಸ್ಥಾನಕ್ಕೆ ಬಂದಿದ್ದೇನೆ ಎಂದರೆ, ಯಾವುದೇ ತಪ್ಪು ಮಾಡದೆ ಬೆಳೆದಿದ್ದೇನೆ ಎಂದರೆ, ಅದಕ್ಕೆ ಅಪ್ಪನೇ ಕಾರಣ. ನನ್ನ ಅಪ್ಪ ಅಂದು ಮನೆಯ ಕಾವಲುಗಾರನಾಗಿದ್ದೇ ಕಾರಣ ಎಂದು ಸ್ಮರಿಸಿಕೊಂಡರು.

ತಾಯಿ ಜೀವ ಕೊಟ್ಟರೆ, ತಂದೆ ಜೀವನ ಕೊಡುತ್ತಾರೆ. ಜೀವನಪೂರ್ತಿ ಅಪ್ಪ ಮಕ್ಕಳಿಗಾಗಿ ಶ್ರಮಿಸುತ್ತಾರೆ. ಅಪ್ಪಂದಿರು ಮಕ್ಕಳ ಪ್ರೀತಿಗಾಗಿ ಮಾತ್ರ ಹಂಬಲಿಸುತ್ತಾರೆ. ಈ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಅಪ್ಪಂದಿರ ದಿನಾಚರಣೆ ಆಚರಿಸಲಾಗುತ್ತದೆ ಎಂದರು.

ನಾನು ಮೊದಲು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ನಾನು ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಬೇಕೆಂದು ಅಪ್ಪ ಬಯಸಿದ್ದರು. ನಾನೆಂದೂ ಅಧ್ಯಕ್ಷನಾಗಲೇ ಇಲ್ಲ. ನಾನು ಎಂಜಿನಿಯರ್‌ ಆಗಬೇಕೆಂದು ಕೂಡ ಅವರು ಬಯಸಿದ್ದರು. ಆದರೆ ನಾನು 27 ವರ್ಷದವನಾಗಿದ್ದಾಗಲೇ ಅಪ್ಪ ತೀರಿಕೊಂಡರು. ಅನೇಕರ ಅಪ್ಪ ಮಕ್ಕಳ ಜೊತೆಗೆ ಇದ್ದಾರೆ. ಆದರೆ ಮಕ್ಕಳು ಅಪ್ಪನನ್ನು ಇಷ್ಟಪಡುತ್ತೇನೆಂದು ಹೇಳುವುದೇ ಬಹಳ ಅಪರೂಪವಾಗಿದೆ. ಮನೆಯಲ್ಲಿ ಇರುವ ದೇವರೇ ತಾಯಿ ಮತ್ತು ತಂದೆ. ಆದರೆ ಅವರನ್ನು ಪೂಜಿಸುವ ಮನಸ್ಸು ಕೆಲವರಿಗೆ ಬರುವುದೇ ಇಲ್ಲ. ಆದರೆ ಅವರು ಕಲ್ಲಿನ ದೇವರಿಗೆ ಪೂಜೆ ಮಾಡುತ್ತಾರೆ. ಸತ್ತ ನಂತರ ಪೂಜೆ ಮಾಡುತ್ತಾರೆ ಎಂದರು.

Tags:
error: Content is protected !!