ಬೆಂಗಳೂರು: ನೆರೆ ರಾಜ್ಯ ಆಂಧ್ರಪ್ರದೇಶ ವಕ್ಫ್ ಮಂಡಳಿಯನ್ನು ರದ್ದುಗೊಳಿಸಿದಂತೆ ನಮ್ಮ ರಾಜ್ಯದಲ್ಲೂ ರದ್ದತಿಯಾಗಬೇಕು ಎಂದು ಕಾಂಗ್ರೆಸ್ ಸರ್ಕಾರಕ್ಕೆ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಆಂಧ್ರಪ್ರದೇಶದಲ್ಲಿ ಎನ್‌ಡಿಎ ನೇತೃತ್ವದ ರಾಜ್ಯ ಸರ್ಕಾರ ವಕ್ಫ್ ಮಂಡಳಿಯನ್ನು ವಜಾಗೊಳಿಸಿ ದಿಟ್ಟ ನಿರ್ಧಾರ ಮಾಡಿರುವುದು ಸ್ವಾಗತಾರ್ಹವಾಗಿದೆ. ಈ ಕಾರಣಕ್ಕೆ ನಾನು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ವಕ್ಫ್ ಮಂಡಳಿಯ ಪರಿಕಲ್ಪನೆಯೂ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಹೀಗಾಗಿ ನಮ್ಮ ರಾಜ್ಯದಲ್ಲೂ ಆಂಧ್ರಪ್ರದೇಶದ ರೀತಿ ವಕ್ಫ್ ಮಂಡಳಿಯನ್ನು ರದ್ದುಗೊಳಿಸಬೇಕು. ಈ ಮೂಲಕ ರೈತರು, ಮಠ-ಮಂದಿರಗಳು, ಜನಸಾಮಾನ್ಯರು ಹಾಗೂ ಸರ್ಕಾರಿ ಆಸ್ತಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ದಬ್ಬಾಳಿಕೆಗೆ ಶಾಶ್ವತ ಅಂತ್ಯ ಹಾಡಬೇಕು ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.





