ಬೆಂಗಳೂರು: ಈ ದರಿದ್ರ ಸರ್ಕಾರ ಇರುವವರೆಗೂ ಕರ್ನಾಟಕದ ಏಳಿಗೆ ಸಾಧ್ಯವಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ರಾಜ್ಯದಲ್ಲಿ ಬಾಣಂತಿಯರು ಸತ್ತರೂ ಪರವಾಗಿಲ್ಲ. ರೈತರು ಆತ್ಮಹತ್ಯೆ ಮಾಡಿಕೊಂಡರೂ ಪರವಾಗಿಲ್ಲ. ಬೆಲೆ ಏರಿಕೆಯಿಂದ ಜನ ತತ್ತರಿಸಿದರೂ ಪರವಾಗಿಲ್ಲ. ರಾಜ್ಯ ಸಾಲದ ಸುಳಿಯಲ್ಲಿ ಸಿಲುಕಿದರೂ ಪರವಾಗಿಲ್ಲ. ಕರ್ನಾಟಕ ಅಭಿವೃದ್ಧಿ ಶೂನ್ಯವಾದರೂ ಪರವಾಗಿಲ್ಲ. ಆದರೂ ಕಾಂಗ್ರೆಸ್ ಸರ್ಕಾರ ಮಾತ್ರ ತನ್ನ ಪಾಡಿಗೆ ತಾನಿದೆ.
ಆಡಳಿತಕ್ಕೆ ಕರೀಬೇಡಿ, ಅಧಿಕಾರಕ್ಕೆ ಮರೀಬೇಡಿ ಅಂತಾಗಿರುವ ಈ ದರಿದ್ರ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕರ್ನಾಟಕದ ಏಳಿಗೆ ಸಾಧ್ಯವಿಲ್ಲ. ಕರ್ನಾಟಕ ಕಾಂಗ್ರೆಸ್ ಮುಕ್ತ ಆಗುವವರೆಗೂ ಕನ್ನಡಿಗರಿಗೆ ನೆಮ್ಮದಿ ಇಲ್ಲ ಎಂದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.