ಬೆಂಗಳೂರು: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿ ಒಂದು ವರ್ಷ ಕಳೆದರೂ ಕೆಲ ಕಾಂಗ್ರೆಸ್ ನಾಯಕರಿಗೆ ಈಗಲೂ ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಸಚಿವ ಎಚ್.ಸಿ.ಮಹದೇವಪ್ಪ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಸಚಿವ ಮಹದೇವಪ್ಪ ಅವರೇ ಹಿಂದುಗಳ ಒಗ್ಗಟ್ಟು, ಹಿಂದುಗಳ ಸಂಭ್ರಮ ಕಂಡರೆ ನಿಮಗೆ ಯಾಕಿಷ್ಟು ಅಸೂಯೆ? ಆದಿಕವಿ ಮಹರ್ಷಿ ವಾಲ್ಮೀಕಿಯ ಶ್ರೀರಾಮನೇ ಬೇರೆ, ಅಯೋಧ್ಯೆಯ ಶ್ರೀರಾಮನೇ ಬೇರೆ ಎಂದು ಹೇಳಿದ್ದೀರಲ್ಲ. ಹಾಗಾದರೆ ರಾಷ್ಟ್ರಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಕೃತಿಯಲ್ಲಿ ಬರುವ ರಾಮ ಯಾರು? ವಾಲ್ಮೀಕಿ ರಾಮನೋ ಅಥವಾ ಅಯೋಧ್ಯೆಯ ರಾಮನೋ ಎಂದು ಪ್ರಶ್ನೆ ಮಾಡಿದರು.
ಹಿಂದುಗಳ ಒಗ್ಗಟ್ಟು ಒಡೆಯುವ, ಹಿಂದು ಸಮಾಜದಲ್ಲಿ ಒಡಕು ಮೂಡಿಸುವ ಈ ಕಮ್ಯುನಿಸ್ಟ್ ಸಿದ್ಧಾಂತಗಳಿಎ ನವಭಾರತದಲ್ಲಿ ಜಾಗವಿಲ್ಲ. ಎಡಪಂಥೀಯ ವಿಚಾರಧಾರೆಯಿಂದ ಪ್ರಣೀತರಾದ ಇಂತಹ ಕಪೋಲಕಲ್ಪಿತ ಕಟ್ಟುಕಥೆಗಳನ್ನು ವಿತಂಡವಾದವನ್ನು ನಂಬುವವರೂ ಇಲ್ಲ.
ನಿಮ್ಮ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಹಿಂದುಗಳ ಶ್ರದ್ಧೆ, ನಂಬಿಕೆಗಳ ಜೊತೆ ಚೆಲ್ಲಾಟವಾಡುವುದನ್ನು ಬಿಟ್ಟುಬಿಡಿ ಎಂದು ಕಿಡಿಕಾರಿದರು.





