Mysore
18
clear sky

Social Media

ಸೋಮವಾರ, 12 ಜನವರಿ 2026
Light
Dark

ಕಾಂಗ್ರೆಸ್ ಸರ್ಕಾರದಲ್ಲಿ ಅಕ್ಷರಶಃ ಕರ್ನಾಟಕ ರೌಡಿಗಳ ರಾಜ್ಯವಾಗಿದೆ: ಆರ್‌.ಅಶೋಕ್‌ ವಾಗ್ದಾಳಿ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ ವಿಚಾರವಾಗಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು ಕಾಂಗ್ರೆಸ್‌ ಸರ್ಕಾರ ಬಂಧಿಸಿರುವುದು ಅಕ್ಷರಶಃ ಕರ್ನಾಟಕ ರೌಡಿಗಳ ರಾಜ್ಯದಂತೆ ಕಾಣುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಕಿಡಿಕಾರಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಸಿಎಂ ಸಿದ್ದರಾಮಯ್ಯನವರೇ ಬಂಧನವಾಗಿ ಪೊಲೀಸ್ ವಶದಲ್ಲಿರುವ ಒಬ್ಬ ಪರಿಷತ್ ಸದಸ್ಯನಿಗೆ ತಮ್ಮ ಸರ್ಕಾರ ರಕ್ಷಣೆ ಕೊಡಲು ಆಗುತ್ತಿಲ್ಲ ಅಂದಮೇಲೆ ನಿಮ್ಮ ಸರ್ಕಾರವನ್ನು ರೌಡಿಗಳು, ಗೂಂಡಾಗಳು ಹೈಜಾಕ್ ಮಾಡಿರಬೇಕು ಅಥವಾ ಸರ್ಕಾರದ ಭಾಗವಾಗಿರುವವರೇ ರೌಡಿಗಳು, ಗೂಂಡಾಗಳಾಗಿರಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ದೇಶದ್ರೋಹಿಗಳು ಯಾವುದೇ ಕಾನೂನು ಕ್ರಮವಿಲ್ಲದೆ ಹೊರಗಿದ್ದಾರೆ. ಆ ದೇಶದ್ರೋಹಿಗಳನ್ನ ಸಮರ್ಥನೆ ಮಾಡಿಕೊಂಡು, ಸುದ್ದಿ ಬಿತ್ತರಿಸಿದ ಮಾಧ್ಯಮಗಳ ಮೇಲೆ ಹೌಹಾರಿದವರು ಇನ್ನೂ ರಾಜಾರೋಷವಾಗಿ ಮಂತ್ರಿಗಳಾಗಿ ಗೂಟದ ಕಾರಿನಲ್ಲಿ ಓಡಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯ ತಹಶೀಲ್ದಾರ್ ಕಚೇರಿಯಲ್ಲಿ ಎರಡನೇ ವಿಭಾಗದ ಸಹಾಯಕ (ಎಸ್‌ಡಿಎ) ರುದ್ರೇಶ್ ಯಾದವಣ್ಣನವರ್ ಅವರ ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಿಎ ವಿರುದ್ಧ ದೂರಿದೆ. ಆ ತನಿಖೆ ಎಲ್ಲಿವರೆಗೆ ಬಂತು. ಎಷ್ಟು ಜನರ ಬಂಧನವಾಗಿದೆ? ಎಂದು ಪ್ರಶ್ನಿಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್‌ ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತನಾಡಬೇಕು

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿ ಸಿ.ಟಿ.ರವಿ ಅವರನ್ನ ಬಿಟ್ಟಿದ್ದೇ ಪುಣ್ಯ ಅಂದರೆ ತಮ್ಮ ಮಾತಿನ ಅರ್ಥವೇನು? ಜೀವಂತವಾಗಿ ಬಿಟ್ಟಿದ್ದೇ ಪುಣ್ಯ ಅಂತಲಾ? ಇನ್ನೂ ಪ್ರಾಣ ತೆಗೆಯದೆ ಉಳಿಸಿರುವುದೇ ಪುಣ್ಯ ಆಂತಲಾ? ಅಥವಾ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರ ತಾಲಿಬಾನಿಗೆ ಸೇರಿದ್ದು ಅಂತಲಾ? ಅವರ ಬೆಂಬಲಿಗರು ತಾಲಿಬಾನಿಗಳು ಅಂತಲಾ? ಕಾನೂನು ಕೈಗೆತ್ತುವ ರೌಡಿಗಳಿಗೆ, ಗೂಂಡಾಗಳಿಗೆ ನಿಮ್ಮ ಮಾತಿನಿಂದ ಏನು ಸಂದೇಶ ಹೋಗುತ್ತದೆ ಎನ್ನುವ ಪ್ರಜ್ಞೆ ತಮಗಿದೆಯೇ? ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ, ತಾವೊಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು. ಜೊತೆಗೆ ರಾಜ್ಯದ ಉಪಮುಖ್ಯಮಂತ್ರಿಗಳು. ಮುಂದೊಂದು ದಿನ ಮುಖ್ಯಮಂತ್ರಿ ಆಗಬೇಕು ಎಂದು ಕನಸು ಕಾಣುತ್ತಿರುವವರು. ಹೀಗಿರುವಾಗ ತಾವು ಜವಾಬ್ದಾರಿಯುತ ಸ್ಥಾನದಲ್ಲಿದ್ದು, ಈ ರೀತಿ ಮಾತನಾಡಬಾರದು. ತಾವು ಮುಖ್ಯಮಂತ್ರಿ ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಪರಿಸ್ಥಿತಿ ಏನಾಗುತ್ತೆ ಎಂದು ತಮ್ಮ ಮಾತುಗಳೇ ಸೂಚನೆ ಕೊಡುತ್ತಿವೆ. ರಾಜ್ಯದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎನ್ನುವುದನ್ನು ಮರೆಯಬೇಡಿ. ತಮ್ಮ ಸ್ಥಾನಕ್ಕೆ ತಕ್ಕಂತೆ ನಡೆದುಕೊಳ್ಳಿ. ಕನಿಷ್ಠ ಪಕ್ಷ ಸಾರ್ವಜನಿಕವಾಗಿ ಮಾತನಾಡುವಾಗಲಾದರೂ ತಮ್ಮ ಸ್ಥಾನಕ್ಕೆ ತಕ್ಕಂತೆ ಮಾತನಾಡಿ ಎಂದು ಹೇಳಿದ್ದಾರೆ.

Tags:
error: Content is protected !!