ಬೆಂಗಳೂರು: ದೆಹಲಿ ಚುನಾವಣೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಗ್ಯಾರೆಂಟಿ ಠುಸ್ ಪಟಾಕಿ ಆಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ನಗರದಲ್ಲಿ ಇಂದು(ಫೆಬ್ರವರಿ.8) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ದೆಹಲಿ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿರುವುದು ಕರ್ನಾಟಕ ಬಿಜೆಪಿಗೆ ಶಕ್ತಿ ತುಂಬಿದಂತಾಗಿದೆ. ಈ ಚುನಾವಣಾ ಫಲಿತಾಂಶವೂ ಮುಂದಿನ ಕರ್ನಾಟಕ ಮತ್ತು ತೆಲಂಗಾಣ ಚುನಾವಣೆಗೆ ದಿಕ್ಸೂಚಿಯಾಗಿದ್ದು, ದೇಶಕ್ಕೆ ಸಿಕ್ಕಿರುವ ಗೆಲುವಾಗಿದೆ ಎಂದರು.
ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಶೂನ್ಯ ಸಾಧನೆ ಮಾಡಲು ರಾಹುಲ್ ಗಾಂಧಿ ಅವರ ಬೆನ್ನಿಗೆ ಬೆನ್ನು ಕೊಟ್ಟು ಸಹಕರಿಸಿದ ಸ್ಟಾರ್ ಕ್ಯಾಂಪೆನರ್ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಎಂದು ವ್ಯಂಗ್ಯ ಮಾಡಿದ್ದಾರೆ.
ದೆಹಲಿ ವಿಧಾನಸಭೆಯ ಕಳಪೆ ಫಲಿತಾಂಶವನ್ನೇ ಆಧಾರವಾಗಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಅವರನ್ನು ಕಡೆಗಣಿಸಿದರೆ ಕರ್ನಾಟದಲ್ಲಿ ಕಾಂಗ್ರೆಸ್ ಪಕ್ಷದ ಗತಿ ಏನಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಬಣದವರು ಕಾಂಗ್ರೆಸ್ ಹೈಕಮಾಂಡ್‌ಗೆ ರಹಸ್ಯ ಪತ್ರಗಳನ್ನು ಬರೆಯುತ್ತಿದ್ದಾರೆ ಎನ್ನುವ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಜೋರಾಗಿಯೇ ಹರಿದಾಡುತ್ತಿದೆ ಎಂದು ಹೇಳಿದ್ದಾರೆ.





