ಬೆಂಗಳೂರು: ರಾಜ್ಯ ಸರ್ಕಾರಕ್ಕೆ 9 ವಿಶ್ವವಿದ್ಯಾನಿಲಯಗಳಿಗೆ ಅನುದಾನ ನೀಡಲು ಹಣವಿಲ್ಲ, ಆದರೆ ಮುಸ್ಮಲಾನ ಶಿಕ್ಷಣಕ್ಕೆ ಕೊಡಲು 1,200 ಕೋಟಿ ರೂ. ನೀಡಲು ಅನುದಾನವಿದೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಮಕ್ಕಳ ಶಿಕ್ಷಣಕ್ಕಿಂತ ಓಲೈಕೆ ರಾಜಕಾರಣವೇ ಹೆಚ್ಚಾಗಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, 342 ಕೋಟಿ ರೂಪಾಯಿ ಅನುದಾನ ನೀಡಲು ಯೋಗ್ಯತೆ ಇಲ್ಲದೆ ಬಿಜೆಪಿ ಸರ್ಕಾರ 9 ಜಿಲ್ಲೆಗಳಲ್ಲಿ ಆರಂಭಿಸಿದ್ದ ವಿಶ್ವವಿದ್ಯಾಲಯಗಳನ್ನ ಮುಚ್ಚುತ್ತೇವೆ ಎಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ಸರ್ಕಾರ, ಮುಸ್ಲಿಮರ ಶಿಕ್ಷಣಕ್ಕೆ 1,200 ಕೋಟಿ ರೂಪಾಯಿ ವಿನಿಯೋಗಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಸ್ವಾಮಿ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಸರ್ಕಾರದ ಬಳಿ 9 ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳಲು 342 ಕೋಟಿ ರೂಪಾಯಿ ಹಣ ಇಲ್ಲ. ಅದೇ ಮುಸ್ಲಿಮರ ಶಿಕ್ಷಣಕ್ಕೆ ಕೊಡಲು 1,200 ಕೋಟಿ ರೂಪಾಯಿ ಇದೆ, ಅಲ್ಲವೇ? ಮುಸ್ಲಿಂ ಮಕ್ಕಳ ಶಿಕ್ಷಣಕ್ಕೆ ಅನುದಾನ ಕೊಡಿ, ಬೇಡ ಅನ್ನಲ್ಲ. ಆದರೆ ಬಡವರು, ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಪಯೋಗವಾಗುವ ವಿವಿಗಳನ್ನು ಯಾಕೆ ಮುಚ್ಚುತ್ತೀರಿ? ಬಡವರ ಮಕ್ಕಳ ಉನ್ನತ ಶಿಕ್ಷಣಕ್ಕೆ 342 ಕೋಟಿ ರೂಪಾಯಿ ಖರ್ಚು ಮಾಡಲೂ ಸಾಧ್ಯವಾಗದಷ್ಟು ಪಾಪರ್ ಆಗಿದೆಯಾ ನಿಮ್ಮ ಕಾಂಗ್ರೆಸ್ ಸರ್ಕಾರ? ಬಡವರ ಮಕ್ಕಳ ಶಿಕ್ಷಣಕ್ಕಿಂತ ಓಲೈಕೆ ರಾಜಕಾರಣವೇ ಹೆಚ್ಚಾಗಿರುವ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು ವಾಗ್ದಾಳಿ ನಡೆಸಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲೂ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣದಲ್ಲಿ ದ್ರೋಹ
ದಲಿತ ಸಮುದಾಯದ ನಾಯಕರನ್ನು ತುಳಿಯುತ್ತಲೇ ಮೇಲೆ ಬಂದಿರುವ ಸಿಎಂ ಸಿದ್ದರಾಮಯ್ಯರವರ ದಲಿತ ವಿರೋಧಿ ನೀತಿಗಳು ಅಲ್ಲಿಗೇ ನಿಂತಿಲ್ಲ. ಎರಡನೇ ಬಾರಿ ಅಧಿಕಾರಕ್ಕೆ ಬಂದಾಗಿನಿಂದ ಎಸ್‌ಸಿಎಸ್‌ಪಿ/ಟಿಎಸ್‌ಪಿ ಹಣವನ್ನ ದುರುಪಯೋಗ ಮಾಡುತ್ತಿರುವ ಕಾಂಗ್ರೆಸ್ ಕರ್ನಾಟಕ ಈ ವರ್ಷದ ಬಜೆಟ್‌ನಲ್ಲೂ ದ್ರೋಹ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
2023-24ರ 11,144 ಕೋಟಿ ರೂ. 2024-25 ರಲ್ಲಿ 14,282 ಕೋಟಿ ರೂಪಾಯಿ ಪರಿಶಿಷ್ಟರ ಹಣವನ್ನ ದುರುಪಯೋಗ ಮಾಡಿದ್ದ ಕಾಂಗ್ರೆಸ್ ಸರ್ಕಾರ ಈ ಬಾರಿ 25,000 ಕೋಟಿ ರೂಪಾಯಿ SCSP/TSP ಹಣವನ್ನ ಗ್ಯಾರೆಂಟಿಗಳ ಹೆಸರಿನಲ್ಲಿ ಗುಳುಂ ಮಾಡುವ ಮೂಲಕ ಪರಿಶಿಷ್ಟ ಸಮುದಾಯಗಳಿಗೆ ಮತ್ತೂಮ್ಮೆ ದ್ರೋಹ ಬಗೆಯಲು ಹೊಂಚು ಹಾಕುತ್ತಿದೆ ಎಂದು ಆರೋಪ ಮಾಡಿದ್ದಾರೆ.





