Mysore
27
overcast clouds

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಸಚಿವ ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಆಗ್ರಹಿಸಿದ ವಿಪಕ್ಷ ನಾಯಕ ಆರ್.‌ಅಶೋಕ್‌

ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಗೆ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಕಾರಣ. ಊರಿಗೆಲ್ಲಾ ಉಪದೇಶ ಮಾಡುವ ಪ್ರಿಯಾಂಕ್ ಖರ್ಗೆ ಮೊದಲು ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶನ ಮಾಡಲಿ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.

ಈ ಕುರಿತು ಅವರು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಖರ್ಗೆ ಕುಟುಂಬಕ್ಕೆ ಅಂಬೇಡ್ಕರ್ ಸಂವಿಧಾನ ಅನ್ವಯ ಆಗುವುದಿಲ್ಲವೇ? ಊರಿಗೆಲ್ಲಾ ಉಪದೇಶ ಮಾಡುವ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆ ಕೊಟ್ಟು ನೈತಿಕತೆ ಪ್ರದರ್ಶನ ಮಾಡಲಿ. ಪ್ರಿಯಾಂಕ್ ಖರ್ಗೆ ಕಲಬುರ್ಗಿ ನಿಜಾಮನೂ ಅಲ್ಲ, ಅವರ ಅನುಯಾಯಿಗಳು ರಜಾಕಾರರೂ ಅಲ್ಲ. ಗುತ್ತಿಗೆದಾರ ಸಚಿನ್ ಸಾವಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆಯವರ ಆಪ್ತರ ಪಾತ್ರವಿರುವುದು ಸ್ಪಷ್ಟವಾಗಿದೆ. ಆದ್ದರಿಂದ ಅವರು ಕೂಡಲೇ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.

ಈ ಹಿಂದೆ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಾಗ, ಸಚಿವ ಈಶ್ವರಪ್ಪನವರ ರಾಜೀನಾಮೆ ಕೇಳಲಾಗಿತ್ತು. ಈಗ ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಲಿ. ಸಚಿನ್ ಪಾಂಚಾಳ ಅವರು ಡೆತ್‌ ನೋಟ್‌ನಲ್ಲಿ ರಾಜು ಕಪನೂರು ಹೆಸರು ಬರೆದಿಟ್ಟು, ಬಳಿಕ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಂಚನೆ ಹಾಗೂ ಹಣಕ್ಕಾಗಿ ಕೊಲೆ ಬೆದರಿಕೆ ಆರೋಪ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸಚಿನ್ ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಇದನ್ನು ಗಮನಿಸಿದ ಕುಟುಂಬಸ್ಥರು ಆತಂಕಗೊಂಡು, ಕೂಡಲೇ ಹುಡುಕಿ‌ ಕೊಡುವಂತೆ ಬೀದರ್‌ನ ಗಾಂಧಿಗಂಜ್ ಪೊಲೀಸ್ ಠಾಣೆಗೆ ಮನವಿ ಮಾಡಿದ್ದರು. ಆದರೆ ದೂರು ದಾಖಲಿಸುವಲ್ಲಿ ಪೊಲೀಸರು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ದೂರಿದ್ದಾರೆ.

ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರು 15 ಲಕ್ಷಕ್ಕೂ ಅಧಿಕ ಹಣ ತೆಗೆದುಕೊಂಡು ಟೆಂಡರ್‌ ನೀಡದೆ ವಂಚನೆ ಮಾಡಿದ್ದು, ಮಾತ್ರವಲ್ಲದೆ 1 ಕೋಟಿ ಹಣ ನೀಡುವಂತೆ ಒತ್ತಡ, ಕೊಲೆ ಬೆದರಿಕೆ ಹಾಕಲಾಗಿದೆ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖವಾಗಿದೆ. ಡೆತ್‌ನೋಟ್‌ನಲ್ಲಿ ಕಲಬುರಗಿಯ ಮಾಜಿ ಕಾರ್ಪೊರೇಟ್ ರವಿ ಕಪನೂರು, ನಂದಕುಮಾರ್ ನಾಗಭುಜಂಗೆ, ಗೋರಖನಾಥ್ ಸೇರಿ 6 ಜನರ ವಿರುದ್ಧ ಜೀವ ಬೆದರಿಕೆ ಆರೋಪ ಮಾಡಲಾಗಿದೆ. ಇಂತಹ ಗೂಂಡಾಗಳನ್ನು ಆಪ್ತರಾಗಿ ಇಟ್ಟುಕೊಂಡ ಸಚಿವರು ಕೂಡ ಇಲ್ಲಿ ಹೊಣೆಗಾರರು ಎಂದು ಅವರು ಹೇಳಿದ್ದಾರೆ.

 

Tags:
error: Content is protected !!