ಮಂಗಳೂರು: ರಾಜ್ಯದಲ್ಲಿರುವುದು ತಾಲಿಬಾನ್ ಸರ್ಕಾರವೇ ಹೊರತು ಪ್ರಜಾಪ್ರಭುತ್ವ ಸರ್ಕಾರಲ್ಲ. ಇಂತಹ ಕೆಟ್ಟ ಆಡಳಿತ ನೀಡುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಕೇಡುಗಾಲ ಬಂದಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಕಿಡಿಕಾರಿದ್ದಾರೆ.
ಮಂಗಳೂರಿನಲ್ಲಿಂದು (ಜು.14) ಶಾಸಕ ಭರತ್ ಶೆಟ್ಟಿ ವಿರುದ್ಧ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.
ಮೈಸೂರು ಮುಡಾದಲ್ಲಿ ಭಾರೀ ಹಗರಣವೇ ನಡೆದಿದೆ. ಸಿಎಂ ಸಿದ್ದರಾಮಯ್ಯ ಎಲ್ಲವನ್ನು ತಿಂದು ತೇಗಿದ್ದಾರೆ. ದಲಿತರ ಭೂಮಿಗಳನ್ನು ಕಸಿದುಕೊಂಡಿದ್ದು, ಅರ್ಜಿ ಸಲ್ಲಿಸಿರುವ ಎಷ್ಟೋ ಜನರಿಗೆ ಈವರೆಗೆ ಸೈಟ್‌ಗಳು ಸಿಕ್ಕಿಲ್ಲ ಎಂದರು.
ವಾಲ್ಮೀಕಿ ನಿಗಮದ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದ ಇತಿಹಾಸದಲ್ಲಿಯೇ ಈ ರೀತಿಯ ಹಗರಣ ನಡೆದಿಲ್ಲ. ಯಾವ ಸರ್ಕಾರವು ದಲಿತರ ಹಣವನ್ನು ನುಂಗಿಲ್ಲ ಈ ಸರ್ಕಾರವನ್ನು ಬಿಟ್ಟು. ದಲಿತರ ಹಣ ಚಿನ್ನದ ಅಂಗಡಿ, ಬಾರ್‌ಗಳಿಗೆ ಹೋಗಿದೆ. ಇದೇ ಹಣದಲ್ಲಿ ಜಮೀನು ಕೂಡಾ ಖರೀದಿಸಲಾಗಿದೆ ಎಂದು ಆರ್ ಅಶೋಕ್ ಆರೋಪ ಮಾಡಿದರು.