Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಅಧಿಕಾರಕ್ಕಾಗಿ ಸಿಎಂ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ: ಆರ್‌.ಅಶೋಕ

ಚಿಕ್ಕಬಳ್ಳಾಪುರ: ಕಾಂಗ್ರೆಸ್‌ ಸರ್ಕಾರದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಸ್ಥಾನದ ಕುರಿತು ಕಚ್ಚಾಟ ನಡೆಯುತ್ತಿದ್ದು, ಅಭಿವೃದ್ಧಿ ಕೆಲಸಕ್ಕೆ ಯಾರೂ ಮುಂದಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯ ಅಧಿಕಾರಕ್ಕಾಗಿ ಜಾತಿಗಳನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಕ್ರೋಶ ಹೊರಹಾಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಸ್ಥಾನದ ಕುರಿತು ಕಾಂಗ್ರೆಸ್‌ ಪಕ್ಷದೊಳಗೆ ಒಡಕು ಉಂಟಾಗಿದೆ. ಈ ಬಗ್ಗೆ ಒಕ್ಕಲಿಗ ಸ್ವಾಮೀಜಿ ಕೂಡ ಮಾತಾಡಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಹಾಗೂ ಮೂರು ಡಿಸಿಎಂ ಮಾಡುವಲ್ಲಿ ಎಲ್ಲರೂ ಮುಳುಗಿದ್ದು, ಅಭಿವೃದ್ಧಿ ಕೆಲಸ ಮಾಡಲು ಯಾರೂ ಮುಂದಾಗುತ್ತಿಲ್ಲ. ಈ ಸರ್ಕಾರಕ್ಕೆ ಕುಡಿಯುವ ನೀರು ಕೊಡುವ ಯೋಗ್ಯತೆಯೂ ಇಲ್ಲವಾಗಿ, ಜನರು ಕಲುಷಿತ ನೀರು ಸೇವಿಸಿ ಸಾಯುತ್ತಿದ್ದಾರೆ. ಡೆಂಘೀ ಸೋಂಕು ಹರಡಿ ಜನರು ತೊಂದರೆಗೊಳಗಾಗಿದ್ದರೂ ಅದಕ್ಕೆ ಸೂಕ್ತ ಕ್ರಮ ವಹಿಸಿಲ್ಲ ಎಂದು ಕಟುವಾಗಿ ಟೀಕಿಸಿದರು.

ಈಗ ಒಕ್ಕಲಿಗರು ಹಾಗೂ ಲಿಂಗಾಯತರು ಮಾತಾಡುತ್ತಿದ್ದಾರೆ. ಮುಂದೆ ಕುರುಬ ಸಮುದಾಯದವರು ಮಾತಾಡುತ್ತಾರೆ. ಜಾತಿಗಳ ನಡುವೆ ಕಾಂಗ್ರೆಸ್‌ ಕಚ್ಚಾಟ ಹುಟ್ಟುಹಾಕಿರುವುದು ಒಳ್ಳೆಯದಲ್ಲ. ಜಾತಿಗಳನ್ನು ಒಡೆಯುವ ಕೆಲಸವನ್ನು ಸಿದ್ದರಾಮಯ್ಯ ಮಾಡಿದ್ದಾರೆ ಎಂದು ಕಿಡಿಕಾರಿದರು.

ಒಂದು ಕುಟುಂಬಕ್ಕೆ 2,000 ರೂ. ನೀಡುತ್ತೇವೆಂದು ಹೇಳಿದ ಕಾಂಗ್ರೆಸ್‌, 8-10 ಸಾವಿರ ರೂ. ದರೋಡೆ ಮಾಡುತ್ತಿದೆ. ಹಾಲಿನ ದರವನ್ನು ಕಳೆದ ವರ್ಷ 3 ರೂ. ಹೆಚ್ಚಿಸಿ, ಈಗ 2 ರೂ. ಹೆಚ್ಚಿಸಿದ್ದಾರೆ. ಪೆಟ್ರೋಲ್‌-ಡೀಸೆಲ್‌ ದರವನ್ನು ನಿರ್ದಾಕ್ಷಿಣ್ಯವಾಗಿ ಏರಿಸಿದ್ದರಿಂದ ಎಲ್ಲ ದರಗಳು ಏರಿಕೆಯಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಾದ ಕೂಡಲೇ ಬಸ್‌ ಟಿಕೆಟ್‌ ದರ ಹೆಚ್ಚಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಸಾರಿಗೆ ನಿಗಮಗಳಿಗೆ ಇನ್ನೂ ಹಣ ಬಾಕಿ ಉಳಿಸಿಕೊಳ್ಳಲಾಗಿದೆ. ಹಾಲಿನ ಪೋತ್ಸಾಹಧನವೂ ಬಾಕಿ ಇದೆ. ಮದ್ಯದ ದರವನ್ನು ಇದೇ ಜುಲೈನಿಂದ ಏರಿಸಲಾಗುತ್ತದೆ ಎಂದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಚೊಂಬು ನೀಡುತ್ತಿದೆ ಎಂದು ಕಾಂಗ್ರೆಸ್‌ ತೋರಿಸಿತ್ತು. ಆದರೆ ವಾಸ್ತವದಲ್ಲಿ ಕಾಂಗ್ರೆಸ್‌ ಸರ್ಕಾರವೇ ಜನರಿಗೆ ಚೊಂಬು ನೀಡುತ್ತಿದೆ. ಕೇಂದ್ರ ಸರ್ಕಾರದ ಬಳಿ ಹೋಗಿ ಅಲ್ಲಿಯೂ ದ್ವೇಷದ ಕಿಡಿ ಕಾರುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಟಾಚಾರಕ್ಕೆ ಸಂಸದರ ಸಭೆ ಕರೆದು ಮಾತಾಡಿದ್ದಾರೆ. ಕೇಂದ್ರ ಸರ್ಕಾರ ಯಾವುದೇ ಯೋಜನೆಗೆ ಅನುದಾನ ನೀಡಿದರೆ, ಅದಕ್ಕೆ ಸಮನಾಗಿ ತಮ್ಮ ಪಾಲನ್ನು ನೀಡಲು ಕೂಡ ರಾಜ್ಯ ಸರ್ಕಾರದ ಬಳಿ ಹಣವಿಲ್ಲ. ಇಡೀ ಆರ್ಥಿಕ ವ್ಯವಸ್ಥೆಯನ್ನು ಕಾಂಗ್ರೆಸ್‌ ಸರ್ಕಾರ ಹಾಳು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Tags: