ಬೆಂಗಳೂರು: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಂದ ಭಿಕ್ಷಾಪಾತ್ರೆ ಹಿಡಿಯುವ ಹಂತಕ್ಕೆ ಬಂದಿದೆ. ಹೀಗಿರುವಾಗ ಯಾವ ಮುಖವನ್ನಿಟ್ಟುಕೊಂಡು ರಾಜ್ಯಪಾಲರರಿಂದ ಸರ್ಕಾರದ ಸಾಧನೆ ಹೊಗಳಿಸಿಕೊಳ್ಳುತ್ತಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಇಂದು(ಮಾರ್ಚ್.3) ವಿಧಾನಸಭೆ ಬಜೆಟ್ ಅಧಿವೇಶನದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವ ದಮನ ಮಾಡುತ್ತಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವನ್ನು ಅತಿ ಹೆಚ್ಚು ತಿದ್ದುಪಡಿ ಮಾಡಿದ್ದೇ ಕಾಂಗ್ರೆಸ್. ಈಗ ಸರ್ಕಾರ, ರಾಜ್ಯಪಾಲರ ಹಲವು ಅಧಿಕಾರ ಮೊಟಕು ಮಾಡುತ್ತಿದೆ. ರಾಜ್ಯಪಾಲರಿಗೆ ಕಾಂಗ್ರೆಸ್ ಸರ್ಕಾರ ಅಪಮಾನ ಮಾಡುತ್ತಿದೆ ಎಂದು ಆರೋಪ ಮಾಡಿದ್ದಾರೆ.
ರಾಜ್ಯಪಾಲರು ಅನೇಕ ಮಸೂದೆಗಳ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಸ್ಪಷ್ಟನೆ ನೀಡಿ ಎಂದು ಕೇಳಿದರೆ, ಸ್ಪಷ್ಟನೆ ನೀಡದೆ ಬೊಬ್ಬೆ ಹಾಕುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಸರ್ಕಾರ ಭಿಕ್ಷಾಪಾತ್ರೆ ಹಿಡಿಯುವ ಹಂತಕ್ಕೆ ಬಂದಿದೆ. ಕಾಂಗ್ರೆಸ್ ನಾಯಕರು ಯಾವ ರಾಜ್ಯಪಾಲರಿಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೋ ಇಂದು ಅದೇ ರಾಜ್ಯಪಾಲರಿಂದ ಸರ್ಕಾರವನ್ನು ಹೊಗಳಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಯಾವ ಮುಖವನ್ನಿಟ್ಟುಕೊಂಡು ರಾಜ್ಯಪಾಲರಿಂದ ಸರ್ಕಾರದ ಸಾಧನೆ ಹೇಳಿಸಿಕೊಳ್ಳುತ್ತಾರೆ. ರಾಜ್ಯಪಾಲರು ಸರಿ ಇಲ್ಲವೆಂದು ಹೇಳಿ ಅವರಿಂದಲೇ ಹೊಗಳಿಸಿಕೊಳ್ಳುತ್ತಿರುವುದು ನಾಚಿಕೆಯ ಸಂಗತಿ ಎಂದು ಕಿಡಿಕಾರಿದ್ದಾರೆ.
ಇನ್ನು ಈ ವಿಚಾರ ಇಟ್ಟುಕೊಂಡು ನಾವು ಇಂದು ಶಾಸಕರ ಭವನದಿಂದ ವಿಧಾನಸೌಧವರೆಗೆ ಪಾದಯಾತ್ರೆ ಮಾಡುತ್ತೇವೆ. ಯಾವುದೇ ಕಾರಣಕ್ಕೂ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸಲ್ಲ. ಅವರ ಭಾಷಣವನ್ನು ನಾವು ಸಮಾಧಾನವಾಗಿಯೇ ಕೇಳುತ್ತೇವೆ. ಆದರೆ ನಾಳೆಯಿಂದ ಸರ್ಕಾರದ ವಿರುದ್ಧ ಸದನದಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.





