ಬೆಂಗಳೂರು: ಸರ್ಕಾರದ ವತಿಯಿಂದ ಕೈಗೊಳ್ಳುವ ಕಾಮಗಾರಿಗಳು ಉತ್ತಮ ಗುಣಮಟ್ಟದ್ದಾಗಿದ್ದರೆ, ಲಕ್ಷಾಂತರ ಜನರ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಹಾಗೆಯೇ ಸರ್ಕಾರದ ಮೇಲಿನ ವಿಶ್ವಾಸವನ್ನು ಹೆಚ್ಚಿಸುತ್ತವೆ. ಈ ನಿಟ್ಟಿನಲ್ಲಿ ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಸಣ್ಣ ನೀರಾವರಿ ಇಲಾಖೆಗೆ ಇಂಜಿನಿಯರ್‌ಗಳಿಗೆ ಸಚಿವ ಎಸ್.ಎನ್.ಭೋಸರಾಜು ನಿರ್ದೇಶನ ನೀಡಿದರು.
ಬೆಂಗಳೂರು ನಗರದ ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಟೆಕ್ನಿಕಲ್ ವರ್ಕ್‌ಶಾಪ್ ಆನ್ ಕ್ವಾಲಿಟಿ ಮಾನಿಟರಿಂಗ್ ವರ್ಕ್‌ಶಾಪ್ ಫಾರ್ ಇರಿಗೇಷನ್ ಇಂಜಿನಿಯರ್ಸ್‌ಗೆ ಚಾಲನೆ ನೀಡಿ ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಾಗಲಿ ಗುಣಮಟ್ಟ ಬಹಳ ಪ್ರಾಮುಖ್ಯತೆಯನ್ನು ವಹಿಸುತ್ತದೆ. ಅದು ತಿನ್ನುವ ಆಹಾರವಿರಲಿ ಅಥವಾ ಬಳಸುವ ಔಷಧಿಯಾಗಿರಲಿ ಗುಣಮಟ್ಟ ಬಹಳ ಮುಖ್ಯ ಎಂದರು.
ದೇಶದಲ್ಲಿ ಶೇ.70ರಷ್ಟು ಜನರು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಇವರಿಗೆ ಶಕ್ತಿ ನೀಡುವ ನಿಟ್ಟಿನಲ್ಲಿ ನೀರಾವರಿ ಇಲಾಖೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.
ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಾಗಾರದಲ್ಲಿ ತಮ್ಮ ಚರ್ಚೆಗಳು ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಮೂಲಕ ರೈತರ ಹಿತದೃಷ್ಟಿಯಿಂದ ಸರ್ಕಾರ ಕೈಗೊಳ್ಳುವ ನೀರಾವರಿ ಯೋಜನೆಗಳಲ್ಲಿ ಪ್ರಾಮಾಣಿಕತೆಯಿಂದ ಗುಣಮಟ್ಟದಿಂದ ಕೂಡಿದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸೂಚನೆ ನೀಡಿದರು.





