ನಂಜನಗೂಡು: ಶ್ರೀಕಂಠೇಶ್ವರ ಸ್ವಾಮಿ ಉತ್ಸವ ಮೂರ್ತಿಗೆ ಎಂಜಲು ನೀರು ಎರಚಿದ ಘಟನೆ ವಿರೋಧಿಸಿ ಶ್ರೀಕಂಠೇಶ್ವರ ಭಕ್ತ ಮಂಡಳಿ ಇಂದು ಕರೆದಿದ್ದ ನಂಜನಗೂಡು ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿರುವುದ ಕಂಡುಬಂದಿದೆ.
ಬಂದ್‌ಗೆ ಸಂಬಂಧಿಸಿದಂತೆ ನಿನ್ನೆ ನಂಜನಗೂಡು ತಾಲೂಕು ಆಡಳಿತ ಮಂಡಳಿಯಲ್ಲಿ ಎಡಿಸಿ ನೇತೃತ್ವದಲ್ಲಿ ಶಾಂತಿ ಸಭೆಯಲ್ಲಿ ಕರೆಯಲಾಗಿದ್ದು, ಬಂದ್‌ಗೆ ಯಾವುದೆ ಅನುಮತಿ ನೀಡಲಾಗುವುದಿಲ್ಲ. ಯಾರು ಬಂದ್ ಮಾಡುವಹಾಗಿಲ್ಲ ಎಂದು ಖಡಕ್ ಎಚ್ಚರಿಕೆಯನ್ನು ಎಡಿಸಿ ರವಾನಿಸಿದ್ದರು.
ಹೀಗಿದ್ದರೂ ಸ್ತಳಿಯ ವ್ಯಾಪಾರಸ್ಥರು ಹಾಗೂ ಸಾರ್ವಜನಿಕರು ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ. ಇಂದು ಮುಂಜಾನೆ 6ಗಂಟೆಯಿಂದ ಸಂಜೆ ೬ಗಂಟೆಯವರೆಗೆ ನಗರದ ಎಲ್ಲಾ ಅಂಗಡಿಗಳನ್ನು ಮುಚ್ಚುವ ಮೂಲಕ ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.
ಅದಲ್ಲದೇ ಇಂದು ೧೦.೩೦ರ ವೇಳೆಗೆ ರಾಕ್ಷಸ ಮಂಟಪ ವೃತ್ತದ ಬಳಿ ಶ್ರೀಕಂಠೇಶ್ವರ ಭಕ್ತ ಮಂಡಳಿ ಪ್ರತಿಭಟನೆ ಹಮ್ಮಿಕೋಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಿಯ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು. ಹಾಗೂ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಬೇಕು ಎಂದು ಆಗ್ರಹಿಸಲು ಮುಂದಾಗಿದ್ದಾರೆ.
ಆಗಮಿಕರು ಯೂಟರ್ನ್ ಮೇಲೆ ಯೂಟರ್ನ್ : ಪ್ರಕರಣಕ್ಕೆ ಸಂಬಂಧಿಸಿದಂತೆ ಆರಂಬದಿಂದ ಇಂದಿನವರೆಗೆ ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತರ ಹೇಳಿಕೆ ಗೊಂದಲದ ಮೇಲೆ ಗೊಂದಲಗಳನ್ನು ಹುಟ್ಟುಹಾಕುತ್ತಿದೆ. ಅಂಧಕಾಸುರನ ಸಂಹಾರದ ವೇಳೆ ನಡೆದ ಘಟನೆಯ ಮರುದಿನ ದೇವಾಲಯದ ಮುಂಭಾಗ ಶ್ರೀಕಂಠೇಶ್ವರ ಭಕ್ತ ಮಂಡಳಿ ನಡೆಸಿದ್ದ ಪ್ರತಿಭಟನೆಯಲ್ಲಿ ದೇವಾಲಯದ ಅರ್ಚಕರು ಭಾಗಿಯಾಗಿ ಬೆಂಬಲ ನೀಡಿದ್ದರು. ಈ ವೇಳೆ ಮಾತನಾಡಿದ್ದ ದೇವಾಲಯದ ಆಗಮಿಕ ನಾಗಚಂದ್ರ ದೀಕ್ಷಿತ್, ದೇವರಿಗೆ ಅಪವಿತ್ರ ನೀರು ಎರಚುವ ಮೂಲಕ ಕಿಡಿಗೇಡಿಗಳು ಮಾಡಿರುವ ಅಪಮಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.
ಆದರೆ ಇದೀಗ ಯೂಟರ್ನ್ ಹೊಡೆದಿರುವ ಆಗಮಿಕರು, ನಿನ್ನೆ ನಡೆದ ಶಾಂತಿ ಸಭೆ ಬಳಿಕ ಪತ್ರಿಕಾ ಪ್ರಕಟಣೆ ನೀಡುವಾಗ, ನಂಜನಗೂಡು ಶ್ರೀಕಂಠೇಶ್ವರನ ಹೆಸರಿನಲ್ಲೆ ಯಾವುದೇ ಭಕ್ತ ಮಂಡಳಿ ಇಲ್ಲ. ಆ ಹೆಸರಿನಲ್ಲಿ ಕಿಡಿಗೇಡಿಗಳು ಬಂದ್‌ಗೆ ಕರೆ ನೀಡಿದ್ದಾರೆ. ಉತ್ಸವ ಮೂರ್ತಿಯ ಮೇಲೆ ಎಂಜನಲು ನೀರು ಎರಚಲಾಗಿದೆ ಎಂದು ಬಿಂಬಿಸುತ್ತಿರುವುದು ಸರಿಯಲ್ಲ. ಭಕ್ತರು ಇಂಥ ವದಂತಿಗಳಿಗೆ ಕಿವಿಕೊಡಬಾರದು ಎಂದು ಹೇಳುವ ಮೂಲಕ ಹಿಂದೆ ಸರಿದಿದ್ದರು.ಬಳಿಕ ಭಕ್ತರು ಪ್ರಶ್ನೆ ಮಾಡಿದಾಗ, ಉನ್ನತ ಅಧಿಕಾರಿಗಳ ಒತ್ತಡಕ್ಕೆ ಮಡಿದು ಈ ರೀತಿಯ ಹೇಳಿಕೆ ನೀಡಬೇಕಾದ ಸಂದರ್ಭ ಎದುರಾಯಿತು ಎಂದು ಹೇಳುವ ಮೂಲಕ ಭಕ್ತ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಜಿಲ್ಲಾಡಳಿತ ಲೋಕಸಭಾ ಚುನಾವಣಾ ಸಿದ್ದತೆಯಲ್ಲಿ ತೊಡಗಿರುವುದರಿಂದ ಶಾಂತಿ ಸಭೆ ಕರೆಯಲು ವಿಳಂಬವಾಗಿದೆ ಎಂದರು. ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಘಟನೆಗೆ ಸಂಬಂಧಪಟ್ಟಂತೆ ತನಿಖೆ ಪ್ರಾರಂಭವಾಗಿದೆ. ತನಿಖೆ ಸಂಪೂರ್ಣವಾಗಲು ಇನ್ನೂ ಕಾಲಾವಕಾಶ ಬೇಕಾಗಿದೆ. ಹೀಗಾಗಿ ತನಿಖೆ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ.
-ಎಡಿಸಿ, ಲೋಕನಾಥ್



