ಬೆಂಗಳೂರು: ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಏ.17 ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ರಾಜ್ಯ ಕಾಂಗ್ರೆಸ್ ಜನಾಕ್ರೋಶ ಯಾತ್ರೆ ನಡೆಸಲಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಈಗಾಗಲೇ ನಮ್ಮ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸುತ್ತಿದೆ. ಇದು ನಮ್ಮ ಸರ್ಕಾರದ ವಿರುದ್ಧ ಅಲ್ಲ. ಬೆಲೆ ಏರಿಕೆ ಮಾಡುತ್ತಿರುವುದು ಮೋದಿ ನೇತೃತ್ವದ ಕೇಂದ್ರ ಸರ್ಕಾರ. ಅವರ ಸರ್ಕಾರದ ವಿರುದ್ದ ಅವರೇ ಜನಾಕ್ರೋಶ ಯಾತ್ರೆ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಬಿಜೆಪಿ ನಮ್ಮ ವಿರುದ್ದ ಯಾತ್ರೆ ಮಾಡುವಂತದು ಏನು ಇಲ್ಲ. ಕೇಂದ್ರದ ನೀತಿಗಳಿಂದ ದೇಶದ ಎಲ್ಲ ವರ್ಗದ ಜನರಿಗೆ ಸಮಸ್ಯೆಯಾಗಿದೆ. ಬಿಜೆಪಿಯವರು ಕೇಂದ್ರ ಸರ್ಕಾರದ ವಿರುದ್ದ ಜನಾಕ್ರೋಶ ಯಾತ್ರೆ ಅಂತ ಬೋರ್ಡ್ ಹಾಕಿಕೊಳ್ಳಲಿ ಎಂದು ಲೇವಡಿ ಮಾಡಿದರು.
ಬೆಂಗಳೂರಿನಲ್ಲಿ 2ನೇ ಏರ್‌ಪೋರ್ಟ್ ನಿರ್ಮಾಣದ ವಿಚಾರವಾಗಿ ಮಾತನಾಡಿ, ಏರ್‌ಪೋರ್ಟ್ ವಿಚಾರದಲ್ಲಿ ಯಾರು ನನ್ನ ಜೊತೆ ಚರ್ಚಿಸಿಲ್ಲ. ನಾನು ನಗರದಲ್ಲಿ ಮತ್ತೊಂದು ಏರ್‌ಪೋರ್ಟ್ ಆಗಬೇಕು ಎಂದು ಹೇಳಿಲ್ಲ. ರಾಜ್ಯದಲ್ಲಿ ಎಲ್ಲೇ ಏರ್‌ಪೋರ್ಟ್ ಮಾಡಿದರೂ ನನಗೆ ಖುಷಿ ಎಂದು ತಿಳಿಸಿದರು.





