ಬೆಂಗಳೂರು: ಕಾಂಗ್ರೆಸ್ ಪಕ್ಷ ರಾಜ್ಯದ ಜನರ ಕೋಟಿಗಟ್ಟಲೇ ತೆರಿಗೆ ಹಣವನ್ನು ಬಳಸಿಕೊಂಡು ಬೆಳಗಾವಿಯಲ್ಲಿ ಅಧಿವೇಶನ ಮಾಡಲು ಹೊರಟಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನೀತಿಯ ವಿರುದ್ಧ ಹಾಗೂ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನವನ್ನು ವಿರೋಧಿಸಿ ನಾಳೆ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಧರಣಿ ನಡೆಸುತ್ತೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರನ್ನು ಹೆಚ್ಚಾಗಿ ಸ್ಮರಿಸಿಕೊಳ್ಳುತ್ತಿದೆ. ಆದರೆ ಹಿಂದೆ ಕಾಂಗ್ರೆಸ್ ಪಕ್ಷವು ಅವಕಾಶ ಸಿಕ್ಕಾಗಲೆಲ್ಲಾ ಅಂಬೇಡ್ಕರ್ ಅವರನ್ನು ನಿಂದಿಸುತ್ತಾ, ಅವಮಾನಿಸುತ್ತಾ ಬಂದಿತ್ತು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಜವಾಹರ್‌ಲಾಲ್ ನೆಹರು ಅವರಿಂದ ಹಿಡಿದು ಇವತ್ತಿನವರೆಗೂ ಈ ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ಬಗ್ಗೆ ಗೌರವ ಹೊಂದಿರಲಿಲ್ಲ ಎಂಬುದು ಜಗಜ್ಜಾಹೀರಾಗಿದೆ.
ಹಿಂದೆ ನೆಹರೂ ಅವರು ಇದ್ದಾಗ ತಾತ್ಕಾಲಿಕ ಸರ್ಕಾರ ರಚಿಸಿದ್ದು, ಅಂಬೇಡ್ಕರ್ ಅವರು ಮಂತ್ರಿಗಳಾಗಿ ಜನಮೆಚ್ಚುವ ಕೆಲಸ ಮಾಡುತ್ತಿದ್ದರು. ಅವರ ಜನಪ್ರಿಯತೆ-ಪ್ರಭಾವ ಹೆಚ್ಚಾಗುವುದನ್ನು ಗಮನಿಸಿ ಕಾಂಗ್ರೆಸ್ ಪಕ್ಷದ ಬೇಳೆ ಬೇಯುವುದಿಲ್ಲ ಎಂದು ಹೇಳಿ ಅವರನ್ನು ನಿಂದಿಸುವ, ಹಿಂಸಿಸುವ ಕೆಲಸ ಮಾಡಿದ್ದರು ಎಂದು ಆರೋಪಿಸಿದರು.