Mysore
19
broken clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ಫೆ.7ರಂದು ಕೇಂದ್ರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಸರ್ಕಾರ ತೆರಿಗೆ ಹಂಚಿಕೆಯಲ್ಲಿ ತಾರತಮ್ಯ ಮತ್ತು ಬರ ಪರಿಹಾರ ವಿತರಣೆ ಮಾಡುವಲ್ಲಿ ರಾಜ್ಯಕ್ಕೆ ಮಲತಾಯಿ ಧೋರಣೆ ಮತ್ತು ಅನ್ಯಾಯ ಮಾಡುತ್ತಿದೆ. ಇದನ್ನು ವಿರೋಧಿಸಿ ಫೆ.7ರಂದು ನವದೆಹಲಿಯ ಜಂತರ್ ಮಂತ‌ರ್ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸೋಮವಾರ ವಿಧಾನಸೌಧದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಭಟನೆಯಲ್ಲಿ ಇದರಲ್ಲಿ ಎಲ್ಲ ಶಾಸಕರು, ವಿಧಾನ ಪರಿಷತ್, ಸಂಸದರು ಭಾಗವಹಿಸಲಿದ್ದಾರೆ. ಬಿಜೆಪಿಯವರೂ ಭಾಗಿಯಾಗಲಿ ಎಂದು ಒತ್ತಾಯಿಸಿದರು.

ರಾಜ್ಯದಿಂದ 4 ಲಕ್ಷ 30 ಸಾವಿರ ಕೋಟಿ ರೂ. ತೆರಿಗೆ ಸಂಗ್ರಹವಾಗುತ್ತಿದೆ. ತೆರಿಗೆ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೂ ನಮಗೆ ತೆರಿಗೆ ಹಣದಲ್ಲಿ ಮೋಸವಾಗುತ್ತಿದೆ. ತೆರಿಗೆ ಹಂಚಿಕೆ ಕಡಿತದಿಂದ ಕರ್ನಾಟಕಕ್ಕೆ 45 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ ಎಂದು ವಿವರಿಸಿದರು.

ರಾಜ್ಯದ ಜನತೆ ನಮಗೆ ಕೊಟ್ಟ ಅವಕಾಶಕ್ಕೆ ನ್ಯಾಯ ಒದಗಿಸಬೇಕಾದುದ್ದು ನಮ್ಮ ಕರ್ತವ್ಯ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರ ನ್ಯಾಯ ಒದಗಿಸಿಕೊಡಲಿದೆ ಎಂದು ಇಲ್ಲಿಯವರೆಗೂ ತಾಳ್ಮೆಯಿಂದ ಕಾಯುತ್ತಿದ್ದೆವು. ಕಳೆದ ಸಾಲಿನ ಬಜೆಟ್ ನಲ್ಲಿ ಹೇಳಿದಂತೆ ನಡೆದುಕೊಳ್ಳುತ್ತಾರೆ ಎಂದು ಕಾದಿದ್ದೆವು. ಆದರೆ ಇದುವರೆಗೂ ಅನ್ಯಾಯ ಸರಿ ಪಡಿಸಿಲ್ಲ. ಇದರ ವಿರುದ್ಧ ಧ್ವನಿ ಎತ್ತಲೇಬೇಕಾಗಿದೆ. ಹೋರಾಟಕ್ಕೆ ಜೊತೆ ನೀಡಲು ಇಡೀ ಸರ್ಕಾರ ಪಕ್ಷ ಭೇದ ಮರೆತು ಆಹ್ವಾನ ನೀಡಿದ್ದೇವೆ. ಕನ್ನಡಿಗರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕಿದೆ. ಕೇಂದ್ರದ ಕಿವಿಯನ್ನು ತೆರೆಸಲು ಹೋರಾಡುತ್ತಿದ್ದೇವೆ ಎಂದರು.

ಭದ್ರಾ ಯೋಜನೆಗೆ 5300 ಕೋಟಿ ಕೊಡುತ್ತೇವೆ ಎಂದು ಕಳೆದ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿ ಈವರೆಗೆ ಒಂದು ರೂ. ಕೂಡ ಬಿಡುಗಡೆ ಮಾಡಿಲ್ಲ. ಬರಗಾಲ ಪರಿಹಾರದ ಹಣವೂ ಇಲ್ಲ. 150 ಮಾನವ ದಿನಗಳಿಗೆ ಕೂಲಿ ಕೊಡಲು ಕೂಡ ಅನುಮತಿ ನೀಡಿಲ್ಲ ಎಂದರು. ಇಂಥ ಹಲವು ಕಾರಣಗಳಿಗಾಗಿ ಅನಿವಾರ್ಯವಾಗಿ ನವದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

14 ನೇ ಹಣಕಾಸು ಆಯೋಗದಲ್ಲಿ ರಾಜ್ಯದ ತೆರಿಗೆಯ ಪಾಲು ಶೇ 4.71% ಇದ್ದದ್ದು, 15 ನೇ ಹಣಕಾಸು ಆಯೋಗದಲ್ಲಿ 3.64% ಗೆ ಇಳಿಕೆಯಾಯಿತು. ಅಂದರೆ ಶೇ 1.07% ಕಡಿಮೆಯಾಗಿದೆ. ಅದರಿಂದ 4 ವರ್ಷಗಳಲ್ಲಿ 45,000 ಕೋಟಿ ರೂ. ರಾಜ್ಯಕ್ಕೆ ಕಡಿತ ಆಯಿತು. ಇದು ಕೇವಲ ನಗದು ಹಂಚಿಕೆಯೊಂದರಲ್ಲೇ ಆಗಿರುವ ಅನ್ಯಾಯ. ಅಂದಾಜಿನ ಪ್ರಕಾರ ಈ ವರ್ಷ ನಮ್ಮ ರಾಜ್ಯಕ್ಕೆ ನಗದು ಹಂಚಿಕೆಯಲ್ಲಿ 62098 ಕೋಟಿ ರೂ.ಗಳು ಕರ್ನಾಟಕಕ್ಕೆ ಕಡಿಮೆಯಾಗಲಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಜಿಎಸ್‌ಟಿ ಜಾರಿಗೆ ಬಂದಾಗ ಇದು ಅವೈಜ್ಞಾನಿಕ ಎಂದು ನಾವು ಸಾರಿ ಸಾರಿ ಹೇಳಿದೆವು. ಆಗ ರಾಜ್ಯದ ತೆರಿಗೆ ಬೆಳವಣಿಗೆ ದರ 15% ಇತ್ತು. ಇದರಿಂದ ತೆರಿಗೆ, ಕೇಂದ್ರದ ಅನುದಾನವೂ ಹೆಚ್ಚಾಗತ್ತೆ ಎಂದು ಕೇಂದ್ರ ಸರಕಾರ ಹೇಳಿತ್ತು. ಆದರೆ ಅದನ್ನೂ ಪರಿಹಾರ ರೂಪದಲ್ಲಿ ರಾಜ್ಯಕ್ಕೆ ತುಂಬಿ ಕೊಡುವುದಾಗಿ ಕೇಂದ್ರ ಹೇಳಿತ್ತು. ಈ ಪರಿಹಾರ ಜೂನ್ 2022 ಕ್ಕೆ ನಿಲ್ಲಿಸಿದ್ದಾರೆ. ಈಗ ಪರಿಹಾರ ಕೊಡ್ತಾ ಇಲ್ಲ. 5 ವರ್ಷಗಳ ಕಾಲ ಮಾತ್ರ ಪರಿಹಾರ ಕೊಟ್ಟರು. ಇದರಿಂದಾಗಿ ಈಗ ನಮ್ಮ ತೆರಿಗೆ ಬೆಳವಣಿಗೆ 15% ಗೆ ಮತ್ತೆ ತಲುಪಲು ಆಗಲೇ ಇಲ್ಲ. ಹೀಗಾಗಿ ಪರಿಹಾರ ಮುಂದುವರೆಸಿ ಎಂದು ಕೇಳಿದೆವು. ಇವತ್ತಿನವರೆಗೂ ಮುಂದುವರೆಸುವ ಬಗ್ಗೆ ತೀರ್ಮಾನವನ್ನೇ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಈಗಲೂ ನಮಗೆ, ನಮ್ಮ ರಾಜ್ಯಕ್ಕೆ ಜಿಎಸ್‌ಟಿ ನಲ್ಲಿ ಅನ್ಯಾಯ ಆಗುತ್ತಲೇ ಇದೆ ಎಂದು ಸಿಎಂ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ