ಬೆಂಗಳೂರು: ಜೆಡಿಎಸ್ ಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಸರ್ಕಾರದ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಏಕಪಕ್ಷೀಯವಾಗಿ ಧರಣಿ ನಡೆಸುತ್ತಿರುವುದು ಸರಿಯಲ್ಲ ಎಂದು ಜೆಡಿಎಸ್ ಹೇಳಿದೆ.
ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಎನ್‌ಡಿಎ ಅಂಗಪಕ್ಷವಾಗಿರುವ ಜೆಡಿಎಸ್ ಪಕ್ಷದ ಜೊತೆ ಚರ್ಚಿಸದೆ ರಾಜ್ಯ ಬಿಜೆಪಿ ನಾಯಕರು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಎರಡು ಪಕ್ಷಗಳು ಒಟ್ಟಾಗಿ ಹೋರಾಡಬೇಕಿತ್ತು. ದೊಡ್ಡಮಟ್ಟದಲ್ಲಿ ಧರಣಿ ಸತ್ಯಾಗ್ರಹ ಆರಂಭಿಸುವ ಮುನ್ನ ಮೈತ್ರಿ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬೇಕಾದಾಗ ಬಳಸಿಕೊಳ್ಳುವ, ಬೇಡವಾದಾಗ ಬೀಸಾಡುವ ರಾಜ್ಯ ಬಿಜೆಪಿ ನಾಯಕರ ಮನೋಭಾವವನ್ನು ಆ ಪಕ್ಷದ ವರಿಷ್ಠರ ಗಮನಕ್ಕೆ ತಂದು, ಮುಂದಿನ ದಿನಗಳಲ್ಲಿ ಒಟ್ಟಿಗೆ ರಾಜ್ಯ ಸರ್ಕಾರದ ವಿರುದ್ಧ ಜಂಟಿ ಹೋರಾಟ ನಡೆಸುವಂತೆ ತಾಕೀತು ಮಾಡಲಾಗುವುದು ಎಂದು ಹೇಳಿದರು.





