ಮೈಸೂರು: ಮುಡಾ ಹಗರಣ ಕುರಿತು ಸಿಎಂ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಹಿನ್ನೆಲೆ ರಾಜ್ಯಾದ್ಯಂತ ಸಿದ್ದರಾಮಯ್ಯ ಬೆಂಬಲಿಗರು, ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.
ಈ ಹಿನ್ನೆಲೆ ಯಾವುದೇ ಕ್ಷಣದಲ್ಲಾದರೂ ಬೆಂಬಲಿಗರು ಪ್ರತಿಭಟನೆ ನಡೆಸುವ ಸಾಧ್ಯತೆ ಇರುತ್ತದೆ. ನಿನ್ನೆಯು ಸಹ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ನಾಳೆಯು ಸಹ ರಾಜ್ಯಾಂದ್ಯಂತ ಪ್ರತಿಭಟನೆಗೆ ಸಜ್ಜಾಗುತ್ತಿರುವುದುದಾಗಿ ರಾಜ್ಯ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎಂಬ ವಿಚಾರ ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಪ್ರತಿಭಟನೆಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟು ಮಾಡುವ ಸಾಧ್ಯತೆ ಇರುವುದರಿಂದ ರಾಜ್ಯಾಂದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬೆಂಗಳೂರು ಹಾಗೂ ಸಿಎಂ ತವರೂರು ಮೈಸೂರು ಸೇರಿದಂತೆ ಎಲ್ಲಾ ಜಿಲ್ಲೆಯಗಳಲ್ಲಿಯೂ ಪೊಲೀಸರು ಹೆಚ್ಚಿನ ಭದ್ರತೆ ವಹಿಸುವಂತೆ ಎಚ್ಚರಿಸಲಾಗಿದೆ. ಪ್ರತಿಭಟನೆಯ ಮಾಹಿತಿ ಪಡೆದು, ಯಾವುದೇ ರೀತಿಯಲ್ಲಿಯೂ ಶಾಂತಿಭಂಗವಾಗದಂತೆ ಎಚ್ಚರ ವಹಿಸುವಂತೆ ಎಲ್ಲಾ ಜಿಲ್ಲೆಗಳ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಸೂಚಿಸಿದ್ದಾರೆ.