ಮಂಡ್ಯ: ಪಾಕ್ ಪರ ಘೋಷಣೆ ಕೂಗಿದ್ದಾರೆಂದು ಬಿಜೆಪಿ ಕಾರ್ಯಕರ್ತರ ವಿರುದ್ಧ ಮಂಡ್ಯದಲ್ಲಿ ಕಾಂಗ್ರೆಸ್ ದೂರು ನೀಡಿದೆ.
2022ರ ಡಿಸೆಂಬರ್ 18 ರಂದು ನಡೆದಿದ್ದ ಪ್ರತಿಭಟನೆಯಲ್ಲಿ ಬಿಜೆಪಿ ಪಾಕಿಸ್ತಾನ್ ಪರ ಘೋಷಣೆ ಕೂಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮಂಡ್ಯದ ಸಂಜಯ್ ವೃತ್ತದಲ್ಲಿ 2022 ಡಿಸೆಂಬರ್ 18 ರಂದು ಮೋದಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಪಾಕ್ ವಿದೇಶಾಂಗ ಸಚಿವನ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈ ವೇಳೆ ಪಾಕಿಸ್ತಾನ್ ಮುರ್ದಾಬಾದ್, ಹಿಂದೂಸ್ತಾನ್ ಜಿಂದಾಬಾದ್ ಘೋಷಣೆ ಕೂಗುತ್ತಿದ್ದ ಬಿಜೆಪಿ ಕಾರ್ಯಕರ್ತರು. ಘೋಷಣೆ ಕೂಗುವ ಬರದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದರು.
ಒಂದೂವರೆ ವರ್ಷದ ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಕನ್ನಂಬಾಡಿ ಕುಮಾರ್ ಎಂಬುವರು ಬಿಜೆಪಿ ಕಾರ್ಯಕರ್ತರ ವಿರುದ್ಧ ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ದೂರಿನನ್ವಯ ಬಿಜೆಪಿ ಕಾರ್ಯಕರ್ತರಾದ ರವಿ, ಶಿವಕುಮಾರ್ ಆರಾಧ್ಯ ಎಂಬುವರ ವಿರುದ್ಧ ಎಫ್‌ಐಆರ್ ದಾಖಲಿಸಿದ ಪೊಲೀಸರು, ಸದ್ಯ ಬಿಜೆಪಿ ಕಾರ್ಯಕರ್ತ ರವಿಯನ್ನು ವಶಕ್ಕೆ ಪಡೆದಿದ್ದಾರೆ.