ಹುಬ್ಬಳ್ಳಿ: ಮುಂಬರುವ ಲೋಕಸಭಾ ಕ್ಷೇತ್ರ ಚುನಾವಣೆಯಲ್ಲಿ ಧಾರವಾಡ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿ ಅವರನ್ನು ಸ್ಥಳಾಂತರಿಸಬೇಕು ಎಂಬ ವೀರಶೈವ-ಲಿಂಗಾಯಿತ ಸ್ವಾಮೀಜಿಗಳ ಒತ್ತಾಯವನ್ನು ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್ ಯಡಿಯೂರಪ್ಪ ತಿರಸ್ಕರಿಸಿದ್ದಾರೆ.
ಧಾರವಾಡ ಲೋಕಸಭಾ ಕ್ಷೇತ್ರದಿಂದ ಪ್ರಹ್ಲಾದ್ ಜೋಶಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಶಿರಹಟ್ಟಿ ಫಕೀರ ದಿಂಗಾಲೇಶ್ವ ಸ್ವಾಮೀಜಿ ಜೋಶಿ ಅವರ ಬಗ್ಗೆ ಬಹುಶಃ ತಪ್ಪಾಗಿ ತಿಳಿದಿರಬೇಕು. ಸ್ವಾಮೀಜಿಗಳ ಮನವೊಲಿಸುವ ಕೆಲಸ ಮಾಡಲಾಗುವುದು ಎಂದರು.
ಎಲ್ಲಾ ಸಮಾಜದ ಸ್ವಾಮಿಗಳು ಜೋಶಿ ಅವರ ಪರವಾಗಿದ್ದಾರೆ. ಅವರು ಒಬ್ಬ ಜನಪ್ರಿಯ ನಾಯಕರಾಗಿದ್ದು, ಈ ಬಾರಿ ಬಹು ದೊಡ್ಡ ಅಂತರದಿಂದ ಜಯ ಗಳಿಸುವ ವಿಶ್ವಾಸವಿದೆ. ಸ್ವಾಮೀಜಿ ಅವರ ಈ ಆರೋಪದ ಹಿಂದೆ ನಮ್ಮ ಪಕ್ಷದವರು ಯಾರೂ ಇಲ್ಲ. ಇವೆಲ್ಲವೂ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದರು.
ಜೋಶಿ ಅವರ ನಾಯಕತ್ವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿಕೊಂಡು, ಸಂಪುಟದಲ್ಲಿ ಉನ್ನತ ಸ್ಥಾನ ನೀಡಿದ್ದಾರೆ. ನೋಡುವವರಲ್ಲಿ ಕೆಲವೊಂದು ತಪ್ಪು ತಿಳುವಳಿಕೆ ಇದ್ದಿರಬಹುದು. ಎಲ್ಲರೊಂದಿಗೂ ಮಾತನಾಡಿ ಸಮಸ್ಯೆ ಪರಿಹರಿಸಲಾಗುವುದು ಎಂದು ಮಾಜಿ ಸಿಎಂ ಬಿಎಸ್‌ವೈ ಇದೇ ಸಂದರ್ಭದಲ್ಲಿ ಹೇಳಿದರು.
ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿಗಳು, ಧಾರವಾಡ ಕ್ಷೇತ್ರಕ್ಕೆ ಪ್ರಹ್ಲಾದ್ ಜೋಶಿ ಬದಲಿಗೆ ಸೂಕ್ತ ಅಭ್ಯರ್ಥಿಯನ್ನು ಹಾಕಬೇಕು. ಇದಕ್ಕೆ ಮಾರ್ಚ್ 31 ಕೊನೆಯ ದಿನಾಂಕ. ಬದಲಾಯಿಸದೇ ಇದ್ದರೇ ಏಪ್ರಿಲ್ 2ರಂದು ಮತ್ತೆ ಸಭೆ ನಡೆಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದರು.





