ಬೆಂಗಳೂರು: ನ್ಯಾಯಾಲಯದಲ್ಲಿ ಪಿಡಿಒ ಅಧಿಕಾರಿಗಳ ಮುಂಬಡ್ತಿಯ ವಿಚಾರ ಇತ್ಯರ್ಥವಾದ ಮೇಲೆಯೇ ಇದರ ಬಗ್ಗೆ ರಾಜ್ಯ ಸರ್ಕಾರ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಶ್ವಾಸನೆ ನೀಡಿದ್ದಾರೆ.
ವಿಧಾನಪರಿಷತ್‌ನಲ್ಲಿ ಇಂದು(ಮಾರ್ಚ್.14) ಬಿಜೆಪಿ ಎಂಎಲ್‌ಸಿ ಚಿದಾನಂದಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಪಿಡಿಒಗಳಿಗೆ 10 ರಿಂದ 11 ವರ್ಷಗಳ ಕಾಲ ಮುಂಬಡ್ತಿ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ನ್ಯಾಯಾಲಯದಲ್ಲಿ ಈ ಬಗ್ಗೆ ರಿಟ್ ಅರ್ಜಿ ಸಲ್ಲಿಕೆಯಾಗಿರುವುದರಿಂದ ನಾವು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲು ಆಗುವುದಿಲ್ಲ. ರಿಟ್ ಅರ್ಜಿ ಇತ್ಯರ್ಥವಾದ ತಕ್ಷಣವೇ ಮುಂಬಡ್ತಿ ನೀಡುವ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಭರವಸೆ ನೀಡಿದ್ದಾರೆ.
ರಾಜ್ಯದ ಕೆಲವು ಕಡೆಗಳಲ್ಲಿ 2-3 ಗ್ರಾಮ ಪಂಚಾಯಿತಿಗಳನ್ನು ಒಬ್ಬ ಪಿಡಿಒ ಅಧಿಕಾರಿಯೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಕಾರ್ಯ ನಿರ್ವಹಣೆಯನ್ನು ಸಮಪರ್ಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಆದರೆ ಮುಂಬಡ್ತಿ ನೀಡಲು ರಾಜ್ಯ ಸರ್ಕಾರ ಮುಕ್ತ ಮನಸ್ಸು ಹೊಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಕೆಪಿಎಸ್‌ಸಿ ಮೂಲಕ 247 ಪಿಡಿಒ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದ ಪಟ್ಟಿಯನ್ನು ಆದಷ್ಟು ಬೇಗ ಪ್ರಕಟಿಸುವಂತೆ ಅಲ್ಲಿನ ಕಾರ್ಯದರ್ಶಿಗಳಿಗೆ ಪತ್ರ ಬರೆಯಲಾಗಿದೆ. ಪರೀಕ್ಷೆ ನಡೆದು ಎರಡೂವರೆ ತಿಂಗಳು ಆಗಿರುವುದರಿಂದ ಯಾಕೆ ವಿಳಂವಾಗುತ್ತಿದೆ ಎಂದು ಕೂಡ ಪ್ರಶ್ನಿಸಿದ್ದೇನೆ. ಹೀಗಾಗಿ ಕೆಪಿಎಸ್‌ಸಿ ಅಂತಿಮ ಪಟ್ಟಿಯನ್ನು ಪ್ರಕಟಿಸಿದ ಬಳಿಕವೇ 247 ಹುದ್ದೆಗಳು ಲಭ್ಯವಾಗಲಿವೆ. ಆ ನಂತರ ಒಬ್ಬರಿಗೆ ಒಂದೇ ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.





