ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಬೆದರಿಕೆ ಹಾಕಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಈ ಬಗ್ಗೆ ವಿಜಯಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲಬುರ್ಗಿಯಲ್ಲಿ ನನ್ನ ವಿರುದ್ಧ ಪ್ರತಿಭಟನೆಗೆ ಬರಬೇಡಿ, ಬಂದರೆ ನಿಮ್ಮ ತಂದೆಯ ಬಂಡವಾಳ ಬಯಲು ಮಾಡುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಬೆದರಿಕೆ ಹಾಕಿದ್ದರು. ಇದೇ ಕಾರಣಕ್ಕಾಗಿ ವಿಜಯೇಂದ್ರ ಕಲಬುರ್ಗಿಯಲ್ಲಿ ನಡೆದ ಪ್ರತಿಭಟನೆಗೆ ಹೋಗಿರಲಿಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಕಲಬುರ್ಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಜಯೇಂದ್ರ ಹಿತೈಷಿಗಳೇ ದೊಡ್ಡ ಮಟ್ಟದ ಹೋರಾಟ ಆಯೋಜನೆ ಮಾಡಿದ್ದರು. ಆದರೂ, ವಿಜಯೇಂದ್ರ ಈ ಹೋರಾಟಕ್ಕೆ ಯಾಕೆ ಹೋಗಲಿಲ್ಲ? ಗೈರಾಗಿದ್ದು ಯಾಕೆ? ಇದಕ್ಕೆ ವಿಜಯೇಂದ್ರ ಅವರೇ ಉತ್ತರಿಸಬೇಕು ಎಂದು ಸವಾಲು ಹಾಕಿದರು.
ವಿಜಯೇಂದ್ರಗೆ ನಿಮ್ಮ ತಂದೆಯ ಎಲ್ಲಾ ವಿಷಯಗಳನ್ನು ಹೊರ ತೆಗೆಯುತ್ತೇನೆಂದು ಪ್ರಿಯಾಂಕ್ ಖರ್ಗೆ ಧಮ್ಕಿ ಹಾಕಿದ್ದರು. ಈ ಭಯದ ಕಾರಣಕ್ಕೆ ವಿಜಯೇಂದ್ರ ಪ್ರತಿಭಟನೆಗೆ ಹೋಗಿಲ್ಲ ಎಂದು ದೂರಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ನಾನು, ಸಿ.ಟಿ.ರವಿ. ಚಕ್ರವರ್ತಿ ಸೂಲಿಬೆಲೆ, ಪ್ರಮೋದ್ ಮುತಾಲಿಕ್, ಪ್ರತಾಪ್ ಸಿಂಹರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಅಡ್ಜೆಸ್ಟ್‌ಮೆಂಟ್‌ಗೆ ಒಳಗಾಗದ ನಮ್ಮನ್ನು ಗುರಿ ಮಾಡಲಾಗಿದೆ ಎಂದು ಆರೋಪಿಸಿದರು.





