ಬೆಂಗಳೂರು : ಬಿಜೆಪಿಯವರುಮಾತಿಗೆ ಮುಂಚೆ ವರಿಷ್ಠರು ಅಂತಾರೆ. ಎಲ್ಲವನ್ನೂ ವರಿಷ್ಠರೇ ಮಾಡೋದಾದ್ರೆ ನೀವೇನು ಬೆರಳು ಚೀಪ್ತಾ ಇದ್ರಾ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಮಾತಿಗೆ ಮುಂಚೆ ವರಿಷ್ಠರು ಅಂತಾರೆ. ಹಾಗಿದ್ರೆ ರಾಜ್ಯ ನಾಯಕರಿಗೆ ಬೆಲೆ ಇಲ್ವಾ? ಎಲ್ಲವನ್ನೂ ವರಿಷ್ಠರೇ ಮಾಡ್ತಾರೆ ಅಂದ್ರೆ ನೀವೇನು ಬೆರಳು ಚೀಪ್ತಾ ಇದ್ರಾ? ಬಿಜೆಪಿಯವರೇ 50 ಜನ ಬರೋದಕ್ಕೆ ರೆಡಿ ಇದ್ದಾರೆ ನೆನಪಿಡಿ, ನಿಮ್ಮ ಎಲ್ಲ ಸಮಸ್ಯೆ ಸರಿಮಾಡಿಕೊಂಡು ಬೆಳಗಾವಿ ಅಧಿವೇಶನಕ್ಕೆ ಬರಲಿ ಎಂದು ಕುಟುಕಿದ್ದಾರೆ.
ಸಿಎಂ ಡಿಕೆಶಿ ಆಗುವುದಾದರೇ ಹೆಚ್‌ಡಿಕೆ ಬೆಂಬಲ ವಿಚಾರಕ್ಕೆ ಪ್ರತಿಕ್ರಿಯಿಸಿ, ಎಚ್‌ಡಿಕೆ ಮತ್ತು ಜೆಡಿಎಸ್ ಬೆಂಬಲ ಕೇಳಿದ್ದು ಯಾರು? ಸಿಎಂ ಯಾರಾಗ್ತಾರೆ ಅನ್ನೋದನ್ನ ಕಟ್ಟಿಕೊಂಡು ಅವರಿಗೇನಾಗಬೇಕು? ಬಹುತೇಕ ಈಗಾಗಲೇ ಜೆಡಿಎಸ್-ಬಿಜೆಪಿ ವಿಲೀನ ಆಗಿದೆ. ನಮಗಂತೂ ಅವರ ಅವಶ್ಯಕತೆಯಿಲ್ಲ. ಅವರ ಅಸ್ತಿತ್ವಕ್ಕೆ ಏನು ಬೇಕಾದ್ರೂ ಹೇಳಿಕೊಳ್ಳಲಿ. ಜೆಡಿಎಸ್ ಬಳಿ ಯಾವುದೇ ವಿಷಯಗಳಿಲ್ಲ. ಮೊದಲು ಭ್ರಷ್ಟಾಚಾರ ವಿಚಾರ ಮಾತನಾಡಿದ್ರು. ಆಮೇಲೆ ಪೆನ್‌ಡ್ರೈವ್ ಅವರ ಜೇಬಿನಲ್ಲೇ ಉಳಿಯಿತು. ಮೊದಲು ಅವರ ಮನೆಯ ಗೊಂದಲಗಳನ್ನು ನಿವಾರಿಸಿಕೊಳ್ಳಲಿ ಎಂದು ಟಾಂಗ್ ನೀಡಿದರು.
ಪದೇ ಪದೇ ಕಲಬುರಗಿ ಜನ ಯಾಕೆ ಆರಿಸಿ ಕಳಿಸಿದ್ದಾರೆ? ಕೆಲಸ ಮಾಡದೇ ಜನ ಸುಮ್ಮನೆ ಆಯ್ಕೆ ಮಾಡಿ ಕಳುಹಿಸ್ತಾರಾ? ಜೆಡಿಎಸ್‌ನವರಿಗೆ ಕೇಳಿ ಜನರು ನಮಗೆ ವೋಟು ಹಾಕ್ತಾರಾ? ನಾನು ಏನೇನು ಮಾಡಿದ್ದೀನಿ ಅಂತ ಬೇಕಿದ್ದರೆ ಕುಮಾರಸ್ವಾಮಿನಾ ಕರೆದುಕೊಂಡು ಹೋಗಿ ತೋರಿಸ್ತೀನಿ. ಲೋಕಸಭೆ ಚುನಾವಣೆ ಮುಗಿದ ಬಳಿಕ ಬಿಜೆಪಿ-ಜೆಡಿಎಸ್‌ನಲ್ಲಿ ಯಾರೂ ಉಳಿಯಲ್ಲ. ಇನ್ನೂ 5 ತಿಂಗಳು ಟೈಂ ಕೊಡ್ತೀನಿ 50 ಜನ ಶಾಸಕರನ್ನ ಕರೆದುಕೊಂಡು ಹೋಗಲಿ ನೋಡೋಣ ಎಂದು ಸವಾಲ್ ಹಾಕಿದ್ದಾರೆ.