ಬೆಂಗಳೂರು : ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ತನಿಖೆ ನಡೆಸಲು ಈಗಾಗಲೇ ಪ್ರಾಥಮಿಕ ಸಿದ್ಧತೆಗಳು ನಡೆದಿವೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎನ್.ರಾಜಣ್ಣ ಈವರೆಗೂ ದೂರು ನೀಡಿಲ್ಲ. ಆದರೆ ವಿಧಾನಸಭೆಯಲ್ಲಿ ಇದು ಪ್ರಸ್ತಾಪವಾಗಿದೆ. ಭಾರಿ ಪ್ರಮಾಣದ ಚರ್ಚೆಯಾಗಿದೆ. ಇಷ್ಟೆಲ್ಲಾ ಆದ ಮೇಲೆ ನಾವು ಸುಮ್ಮನೇ ಇರಲು ಸಾಧ್ಯವಿಲ್ಲ. ಸರ್ಕಾರದ ವತಿಯಿಂದ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚೆಯಾಗಿದೆ. ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ವಿಧಾನಸಭೆಯಲ್ಲಿ ಈವರೆಗೂ ನಡೆಯದೇ ಇರುವಂತಹ ಎಲ್ಲಾ ವಿಚಾರಗಳೂ ಈ ಪ್ರಕರಣದಲ್ಲಿ ನಡೆದಿವೆ. ಹೀಗಾಗಿ ಇನ್ನೂ ತಡ ಮಾಡುವುದು ಸೂಕ್ತವಲ್ಲ ಎಂಬುದು ಸರ್ಕಾರದ ಅಭಿಪ್ರಾಯ. ಮುಖ್ಯಮಂತ್ರಿಯವರ ಜೊತೆ ಚರ್ಚಿಸುವ ಮುನ್ನ ಪೂರ್ವಭಾವಿಯಾಗಿ ಗೃಹ ಇಲಾಖೆಯಿಂದ ಸಾಕಷ್ಟು ತಯಾರಿಗಳನ್ನು ಮಾಡಿಕೊಳ್ಳಲಾಗಿದೆ ಎಂದರು.
ರಾಜಣ್ಣ ಅವರು ದೂರು ನೀಡಿದ ತಕ್ಷಣವೇ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳುತ್ತೇವೆ. ಬಿಜೆಪಿಯವರು ಪ್ರಕರಣವನ್ನು ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ. ಆದರೆ ರಾಜ್ಯಸರ್ಕಾರ ತನ್ನದೇ ಆದ ವಿಚಾರಣೆಯನ್ನು ನಡೆಸಲಿದೆ. ಬಿಜೆಪಿಯವರು ಹೇಳಿದಂತೆ ತನಿಖೆ ಮಾಡಲಾಗುವುದಿಲ್ಲ ಎಂದು ತಿರುಗೇಟು ನೀಡಿದರು.
ಹನಿಟ್ರ್ಯಾಪ್ ಪ್ರಕರಣವನ್ನು ರಾಜ್ಯಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಸಚಿವ ಕೆ.ಎನ್.ರಾಜಣ್ಣ ಅವರ ಜೊತೆಗೆ 48 ಮಂದಿ ಹನಿಟ್ರ್ಯಾಪ್‍ಗೆ ಒಳಗಾಗಿದ್ದಾರೆ. ಅವರ ವಿಡಿಯೋ ಮತ್ತು ಸಿಡಿಗಳಿವೆ ಎಂಬ ಬಗ್ಗೆ ತಮಗೆ ಯಾವುದೇ ಮಾಹಿತಿ ಇಲ್ಲ. ಸದನದಲ್ಲಿ ಏಕಾಏಕಿ ಈ ವಿಚಾರ ಪ್ರಸ್ತಾಪವಾಗಿರುವುದಕ್ಕೆ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನಗೊಂಡಿದೆ ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಹೇಳಿದರು.
ಈ ಪ್ರಕರಣದಲ್ಲಿ ತಮ್ಮ ಮೇಲೆ ಯಾರೂ ಪ್ರಭಾವ ಬೀರುವ ಯತ್ನ ಮಾಡಿಲ್ಲ. ನಮ್ಮ ಪಾಡಿಗೆ ನಾವು ತನಿಖೆಗೆ ತಯಾರಿ ಮಾಡಿಕೊಂಡಿದ್ದೇವೆ. ದೂರು ದಾಖಲಿಸುವಂತೆ ಒತ್ತಡ ಹಾಕಲಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದ ವಿಚಾರ ಎಂದು ತಿಳಿಸಿದರು.





