ಬೆಂಗಳೂರು: ನಟ ದರ್ಶನ್ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪದಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು, ಪೊಲೀಸರ ಉಪಟಳ ತಪ್ಪಿಲ್ಲ. ಇದೀಗ ದರ್ಶನ್ ಬಳಿಯಿರುವ ಬಂದೂಕು ಪರವಾನಗಿ(ಗನ್ ಲೈಸೆನ್ಸ್) ರದ್ದುಗೊಳಿಸಲು ಪೊಲೀಸರು ಮುಂದಾಗಿದ್ದಾರೆ.
ಈ ಸಂಬಂಧ ದರ್ಶನ್‌ಗೆ ನೋಟಿಸ್ ಜಾರಿ ಮಾಡಿರುವ ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ಪದ್ಮಿನಿ ಸಾಹೂ, ಗನ್ ಲೈಸೆನ್ಸ್ ಬಗ್ಗೆ ವಾರದಲ್ಲಿ ಸ್ಪಷ್ಟನೆ ನೀಡುವಂತೆ ತಿಳಿಸಿದ್ದಾರೆ.
ಕೊಲೆ ಆರೋಪದಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ನೀವು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿವೆ. ನಿಮ್ಮ ಬಳಿಯಿರುವ ಪರವಾನಗಿ ಹೊಂದಿರುವ ಬಂದೂಕು ಬಳಸಿ ಸಾಕ್ಷಿಗಳನ್ನು ಬೆದರಿಸುವ ಬಗ್ಗೆ ಅನುಮಾನಗಳಿದ್ದು, ಶಸ್ತ್ರಾಸ್ತ್ರ ಪರವಾನ ರದ್ದು ಮಾಡಬೇಕಿದೆ. ಹೀಗಾಗಿ ಈ ಬಗ್ಗೆ ಒಂದು ವಾರದೊಳಗೆ ಉತ್ತರ ನೀಡಬೇಕು ಎಂದು ನೋಟಿಸ್‌ನಲ್ಲಿ ಸೂಚಿಸಲಾಗಿದೆ.
ಜನವರಿ 7 ರಂದು ಕಳುಹಿಸಿರುವ ನೋಟಿಸ್‌ನ್ನು ದರ್ಶನ್ ಜನವರಿ 10 ರಂದು ಸ್ವೀಕರಿಸಿದ್ದಾರೆ.
ದರ್ಶನ್ ನೋಟಿಸ್‌ಗೆ ಉತ್ತರ ನೀಡಿದ ಬಳಿಕ ಬಂದೂಕು ಪರವಾನಗಿ ರದ್ದುಪಡಿಸುವ ಕುರಿತು ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





