ಮಡಿಕೇರಿ: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶನಿವಾರ ತುಮಕೂರಿನ ಚುನಾವಣಾ ಪ್ರಚಾರ ವೇಳೆ ರಾಜ್ಯ ಕಾಂಗ್ರೆಸ್ ಜಾರಿಗೆ ತಂದಿರುವ ಗ್ಯಾರಂಟಿಗಳಿಂದ ಹಳ್ಳಿಯ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಎಚ್.ಡಿ ಕುಮಾರಸ್ವಾಮಿಯವರ ಈ ಹೇಳಿಕೆ ಕೇವಲ ಸ್ತ್ರೀಯರಿಗೆ ಮಾತ್ರವಲ್ಲ, ಮಾನವ ಕುಲಕ್ಕೆ ಅವಮಾನ ಮಾಡಿದ್ದಾರೆ. ಇಂತಹ ವ್ಯಕ್ತಿಯನ್ನು ಎನ್ ಡಿ ಎ ಮೈತ್ರಿಕೂಟದಲ್ಲಿಟ್ಟುಕೊಳ್ಳುತ್ತೀರ ಎಂದು ಪ್ರಧಾನಿ ಮೋದಿ ಉತ್ತರಿಸಬೇಕು ಎಂದು ಶನಿವಾರ ಮಡಿಕೇರಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಒತ್ತಾಯಿಸಿದರು.
ಹೆಣ್ಣು ಮಕ್ಕಳಿಗೆ ಅವಮಾನ ಮಾಡುವಂತಹ ಇಂತಹ ಹೇಳಿಕೆಗೆ ನನಗೆ ಕುಮಾರಸ್ವಾಮಿಯಿಂದ ಸ್ಪಷ್ಟನೆ ಬೇಕಿಲ್ಲ. ಸ್ವತಃ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನೀಡಬೇಕು ಎಂದು ಆಗ್ರಹಿಸಿದರು.
ಈ ಹೇಳಿಕೆ ತಾಯಿ ಚಾಮುಂಡೇಶ್ವರಿಗೆ ಮಾಡಿದ ಅವಮಾನ. ಯಾರು ಲೆಕ್ಕ ಇಡದಿದ್ದರೂ ಕರ್ಮ ಲೆಕ್ಕ ಇಡುತ್ತದೆ ಎಂಬುದನ್ನು ಕುಮಮಾರಸ್ವಾಮಿ ಮರೆಯಬಾರದು. ಮುಂದಿನ ದಿನಗಳಲ್ಲಿ ಅವರು ಫಲ ಅನುಭವಿಸಲಿದ್ದಾರೆ ಎಂದು ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.





