ಬೆಂಗಳೂರು: ಫೋನ್ ಕದ್ದಾಲಿಕೆ ಮಾಡುತ್ತಿರುವುದು ನೂರಕ್ಕೆ ನೂರರಷ್ಟು ನಿಜ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ವಿಧಾನಪರಿಷತ್ ಸದಸ್ಯ ರಾಜೇಂದ್ರ ಅವರ ಫೋನ್ ಕದ್ದಾಲಿಕೆಯಾಗಿದೆ. ಇದೇ ರೀತಿ ಹಲವು ಶಾಸಕರ ಫೋನ್ ಕದ್ದಾಲಿಕೆಯಾಗಿದೆ. ರಾಜಣ್ಣ ಮತ್ತು ರಾಜೇಂದ್ರ ಅವರನ್ನು ಟ್ರ್ಯಾಪ್ ಮಾಡಲು ಕದ್ದಾಲಿಕೆ ಮಾಡಿಸಿದ್ದಾರೆ. ಈ ಬಗ್ಗೆ ನಾನು ಮತ್ತು ಕುಮಾರಸ್ವಾಮಿ ಮೊದಲಿನಿಂದಲೂ ಹೇಳುತ್ತಿದ್ದೇವೆ. ಸುಮಾರು 2 ವರ್ಷಗಳಿಂದಲೂ ಫೋನ್ ಕದ್ದಾಲಿಕೆಯಾಗುತ್ತಿದೆ ಎಂದು ಆರೋಪಿಸಿದರು.
ಇನ್ನು ನಾವು ಧರ್ಮಾಧಾರಿತ ಮೀಸಲಾತಿ ವಿಚಾರಕ್ಕೆ ಹೋರಾಟ ಮಾಡುತ್ತಿದ್ದೇವೆ. ಮೀಸಲಾತಿ ಭೂತವನ್ನು ರಾಜ್ಯದ ಹಿಂದೂಗಳ ಮೇಲೆ ಹೇರುತ್ತಿದ್ದಾರೆ. ಕಾಮಗಾರಿಗಳಲ್ಲಿ ಶೇ.4ರಷ್ಟು ಮೀಸಲಾತಿಯನ್ನು ಮುಸ್ಲಿಮರಿಗೆ ನೀಡಲು ಮುಂದಾಗಿದ್ದಾರೆ. ಮಂಗಳೂರಿನಲ್ಲಿ ಈಗಾಗಲೇ ಶೇ.5ರಷ್ಟು ಮುಸ್ಲಿಮರು ಗುತ್ತಿಗೆದಾರರಾಗಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಧರ್ಮಾಧಾರಿತ ಮೀಸಲಾತಿ ಬೇಡ ಎಂದಿದ್ದಾರೆ. ಹೀಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ ಎಂದರು.





