Mysore
30
scattered clouds

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ರಾಜ್ಯಕ್ಕೆ ಖಾಲಿ ಚಂಬು ಕೊಟ್ಟ ಬಿಜೆಪಿಗೆ ಜನರೂ ಖಾಲಿ ಚಂಬು ಕೊಡ್ತಾರೆ: ಸುರ್ಜೇವಾಲಾ

ಬೀದರ್: ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಒಂದಾದ ಕರ್ನಾಟಕಕ್ಕೆ ಬರ ಪರಿಹಾರ, ಆದಾಯದ ಪಾಲು ಸೇರಿದಂತೆ ಎಲ್ಲ ವಿಚಾರದಲ್ಲೂ ಘೋರ ಅನ್ಯಾಯ ಮಾಡಿ ಖಾಲಿ ಚಂಬು ನೀಡಿರುವ ಬಿಜೆಪಿಗೆ ಈ ಬಾರಿ ರಾಜ್ಯದ ಜನರು ಚುನಾವಣೆಯಲ್ಲಿ ಖಾಲಿ ಚಂಬನ್ನೇ ನೀಡುತ್ತಾರೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಆಕ್ರೋಶ ಹೊರಹಾಕಿದ್ದಾರೆ.

ಬೀದರ್‌ನ ಪತ್ರಿಕಾ ಭವನದಲ್ಲಿಂದು(ಏ.೨೮) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಅನುಭವಿಸಿರುವ ಬಿಜೆಪಿಯ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು, ಭೀಕರ ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ಸೂಕ್ತ ಪರಿಹಾರ ನೀಡುವಲ್ಲಿ ವಂಚನೆ ಮಾಡಿ, ರಾಜ್ಯದ ಅನ್ನಧಾತರಿಗೆ ಘೋರ ಅನ್ಯಾಯ ಮಾಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಮಳೆ ಕೊರತೆಯಿಂದ ಈ ಬಾರಿ ಬರ ಪರಿಸ್ಥಿತಿ ಎದುರಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಎನ್.ಡಿ.ಆರ್.ಎಫ್. ನಿಯಮಾವಳಿಗಳ ರೀತ್ಯ 18 ಸಾವಿರ ಕೋಟಿ ರೂಪಾಯಿ ಪರಿಹಾರ ನೀಡುವಂತೆ ಕಳೆದ ಸೆಪ್ಟೆಂಬರ್ ನಲ್ಲಿಯೇ ಮನವಿ ಮಾಡಲಾಗಿತ್ತು. ಆದರೆ ದ್ವೇಷದ ರಾಜಕಾರಣ ಮಾಡುತ್ತಿರುವ ಕೇಂದ್ರ ಹಣ ಬಿಡುಗಡೆ ಮಾಡಲಿಲ್ಲ. ಈಗ ನ್ಯಾಯಾಲಯಕ್ಕೆ ಹೋದ ಬಳಿಕ 3400 ಕೋಟಿ ರೂಪಾಯಿ ಘೋಷಿಸಿದೆ ಎಂದರು.

ಕರ್ನಾಟಕ ಸರ್ಕಾರ ಕೋರಿದ್ದು 18 ಸಾವಿರ ಕೋಟಿ ಆದರೆ ಕೇಂದ್ರ ಕೊಟ್ಟಿರುವುದು 3,400 ಕೋಟಿ ಅಂದರೆ ಕೇವಲ ಶೇ.19ರಷ್ಟು ನೀಡಿದೆ. ಇದನ್ನು ನ್ಯಾಯಾಲಯದಲ್ಲೂ ಪ್ರಶ್ನಿಸಲಾಗುವುದು. ಮಿಗಿಲಾಗಿ ಜನತಾ ನ್ಯಾಯಾಲಯದಲ್ಲಿ ಈ ವಿಷಯ ಮಂಡಿಸಲಾಗುವುದು ಎಂದರು.

ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ರಾಜ್ಯಕ್ಕೆ ಪರಿಹಾರ ನೀಡುವಂತೆ 25 ಬಿಜೆಪಿ ಸಂಸದರು ಕೇಳಲೇ ಇಲ್ಲ. ರೈತರ ನೆರವಿಗೆ ಬಾರದೆ ಭಗವಂತ ಖೂಬಾ ಎಲ್ಲಿ ಹೋಗಿದ್ದರು ಎಂದು ಸುರ್ಜೆವಾಲಾ ಪ್ರಶ್ನಿಸಿದರು.

ಮಹಾದಾಯಿ, ಮೇಕೆದಾಟಿಗೆ ಅನುಮತಿ ಏಕಿಲ್ಲ?: ರಾಜ್ಯದಲ್ಲಿ ನೀರಿನ ಸಮಸ್ಯೆ ವಿಪರೀತ ಇದೆ. ಆದರೆ, ಮೇಕೆದಾಟು ಯೋಜನೆ ಇರಲಿ, ಮಹಾದಾಯಿ ಯೋಜನೆ ಇರಲಿ, ಅಥವಾ ಭದ್ರಾ ಯೋಜನೆಯೇ ಇರಲಿ ಇದಾವುದಕ್ಕೂ ಕೇಂದ್ರ ಸರ್ಕಾರ ಹಣವನ್ನೇ ಬಿಡುಗಡೆ ಮಾಡಿಲ್ಲ. ಕರ್ನಾಟಕದ ರೈತರ ಹಿತ ಕಾಯುವ ಬದಲು ಅವರ ಜೀವನದೊಂದಿಗೆ ಆಟವಾಡುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಈ ಚುನಾವಣೆಯಲ್ಲಿ ಹೇಳಿಕೊಳ್ಳಲು ಏನೂ ಇಲ್ಲವಾಗಿದೆ. ಅಭಿವೃದ್ಧಿ ಮಾಡುತ್ತೇವೆ, ಬದಲಾವಣೆ ತರುತ್ತೇವೆ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದು, ಏನೂ ಮಾಡದಿರುವ ಕಾರಣ ಈಗ ಮೀಸಲಾತಿಯಂತಹ ವಿಚಾರ ಮತ್ತು ಮುಸ್ಲಿಂ ವಿಭಜನೆ ವಿಚಾರ ಮಾತನಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಕೇಂದ್ರ ಸರ್ಕಾರ 3400 ಕೋಟಿ ರೂ. ಪರಿಹಾರ ನೀಡಿದೆ, ರಾಜ್ಯ ಸರ್ಕಾರ ಏನು ನೀಡಿದೆ ಎಂದು ಕೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ಅಶೋಕ್ ಗೆ ಅರಿವಿಲ್ಲ, ಇಲ್ಲವೇ ಅವರಿಗೆ ತಿಳಿವಳಿಕೆ ಇಲ್ಲ. ರಾಜ್ಯ ಸರ್ಕಾರ ಬರವನ್ನು ಸಮರ್ಥವಾಗಿ ನಿರ್ವಹಿಸಿದೆ ಎಂದರು.

ಸಚಿವ ಈಶ್ವರ ಬಿ ಖಂಡ್ರೆ, ರಹೀಂ ಖಾನ್, ಮುಖಂಡರುಗಳಾದ ರಾಜಶೇಖರ ಪಾಟೀಲ್, ಭೀಮರಾವ್ ಪಾಟೀಲ್, ಅರವಿಂದ ಅರಳಿ, ಅಶೋಕ್ ಖೇಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಮತ್ತಿತರರು ಜತೆಯಲ್ಲಿದ್ದರು.

Tags: