ಮೈಸೂರು: ಸಂಸತ್ತಿನಲ್ಲಿ ಭದ್ರತಾ ಲೋಪ ಪ್ರಕರಣದ ಆರೋಪಿ ಡಿ.ಮನೋರಂಜನ್ ಅವರಿಗೆ ಪಾಸ್‌ಗೆ ಶಿಫಾರಸು ಮಾಡಿದ್ದ ಸಂಸದ ಪ್ರತಾಪ ಸಿಂಹ ಇದೇ ಮೊದಲ ಬಾರಿಗೆ ಆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಭದ್ರತಾ ಲೋಪದ ಬಗ್ಗೆ ಯಾವುದೇ ವಿವರಣೆ ಕೊಡುವುದಿಲ್ಲ. ಇದನ್ನು ಬಿಟ್ಟು ಬೇರೇನಿದ್ದರೇ ಕೇಳಿ ಎಂದು ಅವರು ಹೇಳಿದ್ದಾರೆ.
ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಪ್ರತಾಪ ಸಿಂಹ ದೇಶದ್ರೋಹಿಯೇ ಅಥವಾ ದೇಶಪ್ರೇಮಿಯೇ ಎನ್ನುವುದು ಬೆಟ್ಟದ ಚಾಮುಂಡಿ ತಾಯಿ ಹಾಗೂ ಕೊಡಗಿನ ಕಾವೇರಿ ತಾಯಿಗೆ ಗೊತ್ತು. ನನ್ನ ಲೇಖನಗಳನ್ನು ಓದಿದ ಓದುಗರಿಗೆ ಗೊತ್ತು’ ಎಂದು ಹೇಳಿದರು.
‘ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಜನರು ಮುಂಬರುವ ಚುನಾವಣೆಯಲ್ಲಿ ನಾನು ದೇಶಪ್ರೇಮಿಯೋ ಅಥವಾ ದೇಶದ್ರೋಹಿಯೋ ಎಂದು ತೀರ್ಮಾನ ಮಾಡುತ್ತಾರೆ. ಈ ವಿಚಾರದಲ್ಲಿ ಇಷ್ಟು ಮಾತ್ರವೇ ಹೇಳುತ್ತೇನೆ. ಆ ಬಗ್ಗೆ ಇನ್ನೇನೂ ಕೇಳಬೇಡಿ’ ಎಂದು ಪ್ರತಿಕ್ರಿಯಿಸಿದರು.
ಹಿಜಾಬ್ ನಿಷೇಧದ ಕುರಿತು ಪ್ರತಿಕ್ರಿಯಿಸಿ, ಇದು ಹಿಂದೂ- ಮುಸ್ಲಿಂ ಎಂಬ ವಿಚಾರವಲ್ಲ. ವಸ್ತ್ರ ಸಂಹಿತೆ ಎಂದಿರುತ್ತದೆ. ಅದನ್ನು ಪಾಲಿಸಬೇಕಷ್ಟೆ ಎಂದು ಹೇಳಿದರು.





