ಬೆಂಗಳೂರು: ಜಮ್ಮುಕಾಶ್ಮೀರದ ಪುಹಲ್ಗಾಮ್‍ನ ಪ್ರಕೃತಿ ಸೌಂದರ್ಯವನ್ನು ಸವಿಯಲು ತೆರಳಿದ್ದ ವೇಳೆ ಉಗ್ರರ ಗುಂಡಿಗೆ ಬಲಿಯಾದ ಇಬ್ಬರು ಕನ್ನಡಿಗರ ಅಂತ್ಯಕ್ರಿಯೆ ಗುರುವಾರ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.
ಬೆಂಗಳೂರಿನ ಮತ್ತಿಕೆರೆ ನಿವಾಸಿ ಭರತ್ ಭೂಷಣ್ ಹಾಗೂ ಶಿವಮೊಗ್ಗದ ಮಂಜುನಾಥ್ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರಾವಧರಗಳೊಂದಿಗೆ ನೆರವೇರಿಸಲಾಯಿತು.
ಭರತ್‍ಭೂಷಣ್ ಅಂತ್ಯಕ್ರಿಯೆ ಒಕ್ಕಲಿಗ ವಿಧಿವಿಧಾನದಂತೆ ಹೆಬ್ಬಾಳದ ವಿದ್ಯುತ್ ಚಿತಾಗಾರದಲ್ಲಿ ನೆರವೇರಿದರೆ, ಮಂಜುನಾಥ್ ಅವರ ಅಂತ್ಯಸಂಸ್ಕಾರವು ಶಿವಮೊಗ್ಗದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಪುತ್ರ ನೆರವೇರಿಸಿಕೊಟ್ಟರು.
ಇದಕ್ಕೂ ಮುನ್ನ ಶ್ರೀನಗರದಿಂದ ಆಗಮಿಸಿದ ಇಬ್ಬರ ಕಳೆಬರಹವನ್ನು ವಿಮಾನ ನಿಲ್ದಾಣದಲ್ಲಿ ಸಂಸದ ತೇಜಸ್ವಿಸೂರ್ಯ ಸೇರಿದಂತೆ ಮತ್ತಿತರರು ಬರಮಾಡಿಕೊಂಡರು.
ಅಲ್ಲಿಂದ ನೇರವಾಗಿ ಬೆಂಗಳೂರಿನ ಮತ್ತಿಕೆರೆಯಲ್ಲಿರುವ ಭರತ್ ಭೂಷಣ್ ನಿವಾಸಕ್ಕೆ ಕರೆತರಲಾಗಿತ್ತು. ಪ್ರವಾಸದಿಂದ ಮಗ ವಾಪಸ್ ಬರುವ ನಿರೀಕ್ಷೆಯಲ್ಲಿದ್ದ ಭರತ್ ಭೂಷಣ್ ತಾಯಿ ಮೃತದೇಹದ ಮುಂದೆ ಕಣ್ಣೀರಿಟ್ಟ ದೃಶ್ಯ ಎಲ್ಲರ ಮನ ಕಲಕುವಂತಿತ್ತು. ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ರಾಜಕೀಯ ನಾಯಕರು ಮೃತರ ನಿವಾಸಕ್ಕೆ ಭೇಟಿ ನೀಡಿ ಅವರ ಪತ್ನಿ ಸುಜಾತಾ ಹಾಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.





