ಬೆಂಗಳೂರು : ಕೌಶಲ್ಯಾಭಿವೃದ್ಧಿ ಇಲಾಖೆಯ ಅಡಿಯಲ್ಲಿ ಕರ್ನಾಟಕ ವೃತ್ತಿಪರ ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿ ನಿಗಮ (ಕೆವಿಟಿಎಸ್‌ಡಿಸಿ) ಮೂಲಕ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ವಿದೇಶ ಅಧ್ಯಯನ ಉಪಕ್ರಮಕ್ಕೆ 5,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಇನ್ನಷ್ಟು ಹೆಚ್ಚಿನ ಭಾಗವಹಿಸುವಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಲಾಖೆಯು, ಭಾನುವಾರ (ಆಗಸ್ಟ್ 17) ಹೋಟೆಲ್ ಲಲಿತ್ ಅಶೋಕ್‌ನಲ್ಲಿ ವಿದೇಶ ಅಧ್ಯಯನ ಎಕ್ಸ್ ಪೋ ಆಯೋಜಿಸಿದೆ. ಇನ್ನಷ್ಟು ಮಂದಿ ನೊಂದಣಿ ಮಾಡಿಕೊಳ್ಳುವ ಸಾಧ್ಯತೆಯೂ ಇದೆ.
ಕರ್ನಾಟಕದ ವಿದ್ಯಾರ್ಥಿಗಳಿಗೆ ಆಕರ್ಷಕ ಶೈಕ್ಷಣಿಕ ಅವಕಾಶಗಳನ್ನು ನೀಡುವ 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯಗಳು ಈಗಾಗಲೇ ಎಕ್ಸ್ ಪೋ ನಡೆಯುವ ಲಲಿತ್ ಅಶೋಕ್ ಹೊಟೇಲ್ ಗೆ ಬಂದಿವೆ. ಭಾನುವಾರ ದಿನಪೂರ್ತಿ ಈ ಪ್ರದರ್ಶನ ನಡೆಯಲಿದೆ. ಹಣಕಾಸಿನ ಸಮಸ್ಯೆಯನ್ನು ಸೇರಿದಂತೆ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ಈ ವೇದಿಕೆ ಒದಗಿಸಿಕೊಡಲಿದೆ.
ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ಸ್ಪರ್ಧಾತ್ಮಕ ಬಡ್ಡಿದರಗಳಲ್ಲಿ ಶಿಕ್ಷಣ ಸಾಲಗಳನ್ನು ನೀಡುವ ಮಳಿಗೆಗಳನ್ನು ಹಾಕಲಾಗಿವೆ. ಸಾರ್ವಜನಿಕ ಸಂಸ್ಥೆಯಾದ ಕರ್ನಾಟಕ ಬ್ಯಾಂಕ್ ಸರ್ಕಾರಕ್ಕೆ ಅತ್ಯಂತ ವಿದ್ಯಾರ್ಥಿ ಸ್ನೇಹಿ ಹಣಕಾಸು ಪ್ಯಾಕೇಜ್‌ಗಳ ಭರವಸೆ ನೀಡಿರುವುದು ಪ್ರಮುಖ ಆಕರ್ಷಣೆಯಾಗಿದೆ.
“ವಿದೇಶದಲ್ಲಿ ಅಧ್ಯಯನ ಮಾಡುವುದು ಇನ್ನು ಮುಂದೆ ಶ್ರೀಮಂತರಿಗೆ ಮಾತ್ರ ಮೀಸಲಾಗಿರುವ ಸವಲತ್ತು ಅಲ್ಲ. ನಮ್ಮ ಸರ್ಕಾರದ ಈ ಕ್ರಮದಿಂದಾಗಿ, ಆರ್ಥಿಕವಾಗಿ ದುರ್ಬಲ ಹಿನ್ನೆಲೆಯ ವಿದ್ಯಾರ್ಥಿಗಳು ಸಹ ಈಗ ಆರ್ಥಿಕ ಹೊರೆಯಿಲ್ಲದೆ ವಿದೇಶದಲ್ಲಿ ಉನ್ನತ ಶಿಕ್ಷಣವನ್ನು ಪಡೆಯಬಹುದು. ಇದು ಭಾರತದಲ್ಲಿ ಇದೇ ರೀತಿಯ ಮೊದಲ ಯೋಜನೆಯಾಗಿದ್ದು,ಜಾಗತಿಕ ಶಿಕ್ಷಣವನ್ನು ಸಮಾಜದ ಎಲ್ಲಾ ವರ್ಗಗಳಿಗೂ ಲಭ್ಯವಾಗುವಂತೆ ಮಾಡಿದೆ” ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಜೀವನೋಪಾಯ ಮತ್ತು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಭಾರತದಿಂದ ವಿದೇಶಕ್ಕೆ ಹೊರ ಹೋದ ನಂತರವೂ ಬೆಂಬಲ ನೀಡಲಾಗುವುದು. ಖಾಸಗಿ ಕಾರ್ಯಕ್ರಮಗಳಿಗಿಂತ ಭಿನ್ನವಾಗಿ, ಸರ್ಕಾರಿ ಬೆಂಬಲಿತ ಯೋಜನೆಯು ವಿದೇಶದಲ್ಲಿ ನಿರಂತರ ಸಹಾಯವನ್ನು ಒದಗಿಸುತ್ತದೆ. ಭಾಗವಹಿಸಲು ಇಚ್ಛಿಸುವ ವಿದ್ಯಾರ್ಥಿಗಳು ಈ ಕೆಳಕಂಡ ವೆಬ್ ಸೈಟ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. http://studyabroad.ksdckarnataka.com





