Mysore
19
overcast clouds
Light
Dark

ಇಲ್ಲಿರುವ ರಾಮನಲ್ಲಿಯೇ ನಮ್ಮೂರಿನ ರಾಮ, ಅಯೋಧ್ಯೆಯ ರಾಮನನ್ನು ಕಾಣಬಹುದು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ರಾಜಕೀಯ ಕಾರ್ಯಕ್ರಮವಲ್ಲ. ಇಲ್ಲಿರುವ ರಾಮನಲ್ಲಿ ನಮ್ಮೂರಿನ ರಾಮ, ಅಯೋಧ್ಯೆಯ ರಾಮನನ್ನು ಕಾಣಬಹುದು. ಎಲ್ಲರೂ ಒದೇ ಅಲ್ಲವೇ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮಹದೇವಪುರ ವಿಧಾನಸಭಾ ಕ್ಷೇತ್ರದ ಹಿರಂಡಹಳ್ಳಿ ಗ್ರಾಮದಲ್ಲಿ ಶ್ರೀ ರಾಮ ಟೆಂಪಲ್ ಟ್ರಸ್ಟ್ ನಿರ್ಮಾಣ ಮಾಡಿರುವ ದೇವಾಲಯದಲ್ಲಿ ಸೀತಾ-ರಾಮ, ಲಕ್ಷ್ಮಣ ಹಾಗೂ 33 ಅಡಿ ಆಂಜನೇಯ ದೇವರ ಪ್ರತಿಷ್ಠಾಪನೆ ಮಾಡಲಾಗಿದ್ದು, ಈ ರಾಮ ಮಂದಿರ ಉದ್ಘಾಟನೆ ಮಾಡಿದ ಬಳಿಕ ಸಿಎಂ ಸಿದ್ದರಾಮಯ್ಯ ಮಾಧ್ಯಮಗಳ ಜೊತೆ ಮಾತನಾಡಿದರು. ನಾನು ಅಯೋಧ್ಯೆಗೆ ಹೋಗುತ್ತೇನೆ ಎಂದಿರುವ ಸಿಎಂ, ಗಾಂಧೀಜಿ ಕೂಡಾ ರಾಮಭಕ್ತರು ಎಂದು ನೆನೆದರು.

ಇನ್ನು ರಾಮ ಮಂದಿರ ಉದ್ಘಾಟನೆ ದಿನದಂದು ರಜೆ ನೀಡದ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿರುವ ಅವರು, ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೂ ರಜೆ ನೀಡಿದೆಯಾ?. ಕಾರ್ಯಕ್ರಮ ನಡೆಯುತ್ತಿರುವುದು ಅಯೋಧ್ಯೆಯಲ್ಲಿ. ದೆಹಲಿ, ಕೇರಳ, ಪಶ್ಚಿಮ ಬಂಗಾಳದಲ್ಲಿ ರಜೆ ನೀಡಲಾಗಿದೆಯಾ ಎಂದು ಪ್ರಶ್ನಿಸಿದರು.

ಯಾವತ್ತು ನಾನು ದೇವರ ಅಸ್ಥಿತ್ವವನ್ನು ವಿರೋಧ ಮಾಡಿಲ್ಲ: ಶ್ರೀರಾಮ ದೇಗುಲ ಉದ್ಘಾಟನೆಯ ಬಳಿಕ, ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಿಎಂ, ಶ್ರೀರಾಮ ಚಂದ್ರ, ಸೀತಾದೇವಿ, ಲಕ್ಷ್ಮಣ, ಆಂಜನೇಯ ಇವರು ಮೂರ್ತಿಗಳುಳ್ಳ ಮೂರ್ತಿ ಪ್ರತಿಷ್ಠಾನೆಯಲ್ಲಿ ಸಂತೋಷದಿಂದ ಭಾಗವಹಿಸಿದ್ದೀವಿ. ದೇಶದ ಎಲ್ಲಾ ಜನರು ರಾಮನನ್ನು ಪೂಜಿಸುತ್ತಾರೆ. ರಾಜ್ಯದ ಹಳ್ಳಿಗಳಲ್ಲಿ ರಾಮನ ದೇವಾಲಯವಿದೆ. ನಮ್ಮೂರಿನಲ್ಲಿ ನಾನು ರಾಮಮಂದಿರ ಕಟ್ಟಿಸಿದ್ದೇನೆ. ಯಾವತ್ತು ಕೂಡಾ ನಾನು ದೇವರ ಅಸ್ಥಿತ್ವವನ್ನು ವಿರೋಧ ಮಾಡಿಲ್ಲ. ನಾನು ಆಸ್ತಿಕನೇ, ನಾಸ್ತಿಕನಲ್ಲ ಎಂದು ಹೇಳಿಕೆ ನೀಡಿದ್ದಾರೆ.

ದೇವನೊಬ್ಬ, ನಾಮ ಹಲವು ಅಂತ ಹೇಳ್ತಾರೆ. ಕೆಲವರು ಈಶ್ವರ, ಆಂಜನೇಯ, ಕೃಷ್ಣಾ, ಚಾಂಮುಂಡಿ, ತಿಮ್ಮಪ್ಪ ರಾಮನನ್ನ ಪೂಜಿಸುತ್ತಾರೆ. ಹೀಗೆ ಬೇರೆಬೇರೆ ಹೆಸರುಗಳನ್ನ ದೇವರನ್ನ ಕರೆದು ಪೂಜಿಸುತ್ತಿರುವುದು ಅನಾದಿ ಕಾಲದಿಂದಲೂ ಬಂದಿದೆ. ರಾಮಾಯಣ ನಮಗೆ ಆದರ್ಶ ಕೊಟ್ಟಿದೆ ಎಂದರು.

ರಾಮ ರಾಜ್ಯದ ಕನಸನ್ನು ಗಾಂಧೀಜಿಯವರು ಕಂಡಿದ್ದರು. ರಾಮರಾಜ್ಯ ಎಂದರೆ ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಎಲ್ಲಾ ಧರ್ಮಗಳು ಮನುಷ್ಯನ ಒಳಿತನ್ನು ಬಯಸುತ್ತದೆ. ನಮ್ಮ ಸಂವಿಧಾನದಲ್ಲಿ ಸಹಿಷ್ಣುತೆ, ಸಹಬಾಳ್ವೆ ಎಂದು ಸ್ಪಷ್ಟವಾಗಿ ಬರೆದುಕೊಂಡಿದ್ದೇವೆ. ಎಲ್ಲರೂ ಮನುಷ್ಯರಾಗಿ ಪ್ರೀತಿ ವಿಶ್ವಾಸದಿಂದ ಬಾಳಬೇಕು. ಇದೇ ಅಂಶಗಳನ್ನು ರಾಮಾಯಣ ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಿರುವುದು ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ