ಬೆಂಗಳೂರು: ಇಲ್ಲಿನ ಪ್ಯಾಲೆಸ್ ಗ್ರೌಂಡ್‌ನ ತ್ರಿಪುರವಾಸಿನಿ ಆವರಣದಲ್ಲಿ ಜನವರಿ 23 ರಿಂದ 25 ರವರೆಗೆ ಸಾವಯವ ಮತ್ತು ಸಿರಿಧಾನ್ಯಗಳ ಅಂತರಾಷ್ಟ್ರೀಯ ವಾಣಿಜ್ಯ ಮೇಳವನ್ನು ಆಯೋಜಿಸಲಾಗುತ್ತಿದೆ. ಸದರಿ ಕಾರ್ಯಕ್ರಮಕ್ಕೆ ಹೊರ ರಾಜ್ಯಗಳಲ್ಲಿ ನಡೆಯುವ ಮೇಳಗಳ ವಾಣಿಜ್ಯ ಆಸಕ್ತರನ್ನು ಆಹ್ವಾನಿಸಲಾಗಿದೆ ಎಂದು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೃಷಿ ಮೇಳ ಮಾದರಿ ಸಿರಿಧಾನ್ಯ ಮೇಳ ಆಯೋಜಿಸಿ, ಅಂತರಾಷ್ಟ್ರೀಯ ವಾಣಿಜ್ಯ ಬೆಳೆಗಳ ಬಗ್ಗೆ ಅರಿವು ಮೂಡಿಸಿದ್ದು, ಹಲವು ಕೃಷಿ ವಿಜ್ಞಾನಿಗಳು ಭಾಗವಹಿಸಲಿದ್ದಾರೆ ಎಂದರು.
ಕಳೆದ ವರ್ಷ ರಾಜ್ಯದಲ್ಲಿ ನಡೆದ ಅಂತರಾಷ್ಟ್ರೀಯ ಸಿರಿಧಾನ್ಯ ಮೇಳಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಮೆಚ್ಚುಗೆ ವ್ಯಕ್ತಪಡಿಸಿದೆ. ದೇಶದ ಅನೇಕ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಸಿರಿಧಾನ್ಯಗಳ ಉತ್ಪನ್ನ ಸೃಷ್ಠಿಸುವ ನಿಟ್ಟಿನಲ್ಲಿ ಅರಿವು ಮೂಡಿಸಲಾಗುವುದು, ಅಂತರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಇದಕ್ಕೆ ಮಳಿಗಗಳನ್ನು ಆಯೋಜಿಸಲಾಗಿದೆ. ರೈತರಿಗೂ ಕಾರ್ಯಾಗಾರ ಆಯೋಜಿಸಿ, ವಿಚಾರ ಸಂಕಿರ್ಣಗಳನ್ನು ನಡೆಸಿ ವಿಚಾರಗಳನ್ನು ತಿಳಿಸಿಕೊಡಲಾಗುವುದು ಎಂದರು.
ವಿದೇಶಿ ಸರ್ಕಾರಗಳ ಕೃಷಿ ಮುಖ್ಯಸ್ಥರ ಭಾಗಿ
ಮೇಳದಲ್ಲಿ ಸ್ವಿಡ್ಜರ್‌ಲ್ಯಾಂಡ್, ಸ್ಪೇನ್, ಆಸ್ಟ್ರೇಲಿಯಾ, ಕೀನ್ಯಾ, ರೋಮ್ ಸೇರಿದಂತೆ ಅನೇಕ ವಿದೇಶಿ ಸರ್ಕಾರಗಳ ಕೃಷಿ ಮುಖ್ಯಸ್ಥರು ಭಾಗವಹಿಸಲಿದ್ದು, ದೇಶದ 2೦ಕ್ಕೂ ಹೆಚ್ಚು ಮಂತ್ರಿಗಳು, ರೈತ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಸಿರಿಧಾನ್ಯ ಮೇಳದ ವಿಚಾರವಾಗಿ ತೈವಾನ್ ರಾಷ್ಟ್ರಕ್ಕೂ ಭೇಟಿ ನೀಡಿ ಮಾಹಿತಿ ನೀಡಲಾಗಿದೆ. ಮಂಡ್ಯದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ವೇಳೆ ಜಾಗೃತಿ ಮೆರವಣಿಗೆ ಹಾಗೂ ಮೇಳದಲ್ಲಿ ಮಳಿಗೆಗಳನ್ನು ನೀಡಿ ಸಿರಿಧ್ಯಾನಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.
ಮೇಳದ ಹಿನ್ನಲೆ ಹಲವು ಪೂರ್ವಭಾವಿ ಕಾರ್ಯಕ್ರಮ
ಸಿರಿಧಾನ್ಯ ಮತ್ತು ಸಾವಯವ ಮೇಳದ ಅಂಗವಾಗಿ ಹಲವು ಪೂರ್ವಭಾವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಜ.೦7, ೦8 ರಂದು ಬೆಂಗಳೂರಿನ ಸ್ಲಿರ್ಫ್‌ಕ್ಯುಲಿನರಿ ಅಕಾಡೆಮಿಯಲ್ಲಿ ರಾಜ್ಯ ಮಟ್ಟದ ಪಾಕಸ್ಪರ್ಧೆ, ಜ.1೦ಕ್ಕೆ ಕ್ರಿಸ್ತು ಜಯಂತಿ ಕಾಲೇಜಿನಲ್ಲಿ ಸಿರಿಧಾನ್ಯಗಳ ಸುಸ್ಥಿರ ಭವಿಷ್ಯಕ್ಕಾಗಿ ಮಹತ್ವದ ಧಾನ್ಯಗಳ ವಿಚಾರವಾಗಿ ಪ್ಯಾನಲ್ ಚರ್ಚೆ ಜ.17 ರಂದು ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಸಿರಿಧಾನ್ಯಗಳ ಪಾಕಶಾಸ್ತ್ರ ವಿಚಾರ ಸಂಕಿರಣ, ಜ.19 ರಂದು ಕಬ್ಬನ್ ಪಾರ್ಕ್‌ನಲ್ಲಿ ಸಿರಿಧಾನ್ಯ ಓಟ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ವಾಣಿಜ್ಯ ಮೇಳದಲ್ಲಿ ರಾಜ್ಯದ ಆಯಾ ಪ್ರದೇಶಕ್ಕೆ ಸೂಕ್ತವಾದ ದೇಸಿ ತಳಿಗಳ ಸಂರಕ್ಷಣೆ, ವಿತರಣೆಯ ಮಾಹಿತಿ, ಮಣ್ಣಿನ ಫಲವತ್ತತೆ, ಮಣ್ಣಿನ ಪರೀಕ್ಷೆ, ಯಾವ ರೀತಿಯ ಮಣ್ಣಿಗೆ ಯಾವ ಬೆಳೆ ಬೆಳೆಯಬಹುದಾಗಿದೆ ಎಂಬುದು, ಮಣ್ಣಿನ ಆರೋಗ್ಯದ ಬಗ್ಗೆ ರೈತರಿಗೆ ಮೇಳದಲ್ಲಿ ತಿಳಿಯಲಿದೆ ಎಂದು ಹೇಳಿದರು.
2೦ ಕೋಟಿ ವೆಚ್ಚದಲ್ಲಿ ಮಾಹಿತಿ ಕೇಂದ್ರ
ಸಿರಿಧಾನ್ಯಗಳಿಂದ ಆಹಾರೋತ್ಪನ್ನಗಳು ರುಚಿಕರವಾಗಿ ಇರುವುದು ಎಲ್ಲರಿಗೂ ಇಷ್ಟವಾಗುವಂತಹ ರೀತಿಯಲ್ಲಿ ಸವಿಯನ್ನು ನೀಡಲಿದೆ. ಸಿರಿಧಾನ್ಯ ಆಹಾರ ಉತ್ಪನ್ನಗಳ ಸಂರಕ್ಷಣೆ ಹಾಗೂ ಚಿರಪರಿಚಿತವನ್ನಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಸಿರಿಧಾನ್ಯ ವಿಚಾರಗಳನ್ನು ತಿಳಿಯಲು ರೈತರಿಗೆ ಬೆಂಗಳೂರಿನ ಹೆಬ್ಬಾಳದಲ್ಲಿ ಕೇಂದ್ರವೊಂದನ್ನು 2೦ ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.





