ವಿಜಯಪುರ: ಒಂದು ದೇಶ ಒಂದು ಚುನಾವಣೆ ಮಸೂದೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಬಿಜೆಪಿ ಮಾಡಿರುವ ಪ್ಲ್ಯಾನ್ ಎಂದು ಡಿಸಿಎಂ ಡಿಕೆ ಶಿವಕುಮಾರ್ ಮಸೂದೆ ಮಂಡನೆ ವಿಚಾರಕ್ಕೆ ಕಿಡಿಕಾರಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ದೇಶ ಒಂದು ಚುನಾವಣೆ ಮಸೂದೆಯು ಸಂಸದೀಯ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯ ವಿರುದ್ಧವಾಗಿದೆ. ಈ ಮಸೂದೆ ರಾಜ್ಯದ ಹಕ್ಕುಗಳನ್ನು ಮೊಟಕುಗೊಳಿಸುವ ಉದ್ದೇಶ ಹೊಂದಿದೆ ಎಂದು ಹೇಳಿದ್ದಾರೆ.
ಇದು ಕಾಂಗ್ರೆಸ್ ಪಕ್ಷದ ಸಿದ್ದಾಂತಕ್ಕೆ ವಿರುದ್ದವಾಗಿದೆ. ದೇಶಾದ್ಯಂತ ನಮ್ಮ ರಾಷ್ಟ್ರೀಯ ನಾಯಕರು ಇದನ್ನು ವಿರೋಧಿಸಿದ್ದಾರೆ. ಇತ್ತೀಚಿಗೆ ಪ್ರಾದೇಶಿಕ ಪಕ್ಷಗಳು ತಮ್ಮ ನೆಲದಲ್ಲಿ ಹಿಡಿತ ಸಾಧಿಸುತ್ತಿವೆ. ಇದನ್ನು ಸಹಿಸದ ಕೇಂದ್ರ ಸರ್ಕಾರ ಇಂತಹ ಮಸೂದೆಗಳನ್ನು ಜಾರಿ ಮಾಡುವ ಮೂಲಕ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಲಮಟ್ಟಿ ಸಂತ್ರಸ್ತರ ವಿಚಾರವಾಗಿ ಮಾತನಾಡಿದ ಅವರು, ಭೂ ಸ್ವಾಧೀನ ನೋಟಿಫಿಕೇಶನ್ ಆಗಬೇಕಿದೆ. ನೋಟಿಫಿಕೇಶನ್ ಮುಂಚೆಯೇ ಕೆಲಸ ಮಾಡಬೇಕಾ ಅಥವಾ ಬೇಡವಾ ಎನ್ನುವುದರ ಬಗ್ಗೆ ಚರ್ಚೆ ನಡೆದಿದೆ. ಬೆಂಗಳೂರಿನಲ್ಲಿ ಇಷ್ಟು ಬೆಲೆ ಇಲ್ಲ. ಬೊಮ್ಮಾಯಿ ಸರ್ಕಾರದ ಅವಧಿಯಲ್ಲಿ ನೀಡಿದ ರೇಟ್ ನೀಡಲು ನಾವು ಸಿದ್ದರಾಗಿದ್ದೇವೆ. ಸಿಎಂ ಇದೇ ವಿಚಾರವಾಗಿ ಸೋಮವಾರ ಸಭೆ ನಡೆಸಲಿದ್ದಾರೆ. ಸಂತ್ರಸ್ತರ ಬೇಡಿಕೆಗಳಿಗನುಗುಣವಾಗಿ ಕಾನೂನಿನ ಚೌಕಟ್ಟಿನಲ್ಲಿ ಏನು ಮಾಡಬಹುದೋ ಅದನ್ನು ಮಾಡುತ್ತೇವೆ. ಅದಕ್ಕೂ ಮೊದಲು ಕೇಂದ್ರ ಗೆಜೆಟ್ ನೋಟಿಫಿಕೇಷನ್ ಮಾಡಬೇಕಿದೆ. ಕೇಂದ್ರ 16 ಸಾವಿರ ಕೋಟಿ ಮಾತ್ರ ಕೊಟ್ಟಿದೆ ಎಂದು ಹೇಳಿದರು.





