ಬೆಂಗಳೂರು: ಸಾರಿಗೆ ಮುಷ್ಕರದಲ್ಲಿ ಭಾಗಿಯಾಗಿದ್ದ ನೌಕರರಿಗೆ ನೋಟಿಸ್ ನೀಡುತ್ತಿರುವುದನ್ನು ನಿಲ್ಲಿಸದೇ ಇದ್ದರೆ, ಎಲ್ಲಾ ಡಿಪೋಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಂಟಿಕ್ರಿಯಾ ಸಮಿತಿ ಎಚ್ಚರಿಕೆ ನೀಡಿದೆ.
ನಿನ್ನೆ ಹೈಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಮುಷ್ಕರವನ್ನು ಸಾರಿಗೆ ನಿಗಮಗಳ ನೌಕರರ ಜಂಟಿಕ್ರಿಯಾ ಸಮಿತಿ ಮುಂದೂಡಿದೆ. ನಾಳೆ ಹೈಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಡೆಯಲಿದ್ದು, ಜಂಟಿಕ್ರಿಯಾ ಸಮಿತಿ ಮುಖಂಡರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.
ನಿನ್ನೆ ಸಂಜೆಯಿಂದಲೇ ಮುಷ್ಕರದಲ್ಲಿ ಭಾಗಿಯಾಗಿದ್ದ ಸಾರಿಗೆ ನೌಕರರು ಹಾಗೂ ಸಿಬ್ಬಂದಿಗೆ ಸಾರಿಗೆ ನಿಗಮಗಳು ನೋಟಿಸ್ ನೀಡಲಾರಂಭಿಸಿವೆ. ಮುಷ್ಕರದಲ್ಲಿ ಭಾಗಿಯಾಗಿದ್ದವರನ್ನು ಕೆಲಸದಿಂದ ವಜಾಗೊಳಿಸುವ ಬೆದರಿಕೆ ಹಾಕಲಾಗುತ್ತಿದೆ.
ಜಂಟಿಕ್ರಿಯಾ ಸಮಿತಿಯನ್ನು ನಂಬಿ ಮುಷ್ಕರದಲ್ಲಿ ಭಾಗಿಯಾಗಿದ್ದ ಸಾವಿರಾರು ಮಂದಿ ಈಗ ಕೆಲಸ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ನಿಗಮಗಳ ಹಿರಿಯ ಅಧಿಕಾರಿಗಳು ವಾಟ್ಸ್‌ಆ್ಯಪ್ ಮೂಲಕವೇ ನೋಟಿಸ್‌ಗಳನ್ನು ಕಳುಹಿಸಿ ತ್ವರಿತ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡುತ್ತಿದ್ದಾರೆ.
ಸರ್ಕಾರಕ್ಕೆ 22 ದಿನಗಳ ಮುಂಚಿತವಾಗಿಯೇ ನೋಟಿಸ್ ನೀಡಿ, ನಾವು ಮುಷ್ಕರ ನಡೆಸಿದ್ದೇವೆ. ನಿಯಮ ಬಾಹಿರವಾಗಿ ಯಾವುದೇ ಹೆಜ್ಜೆ ಇಟ್ಟಿಲ್ಲ ಎಂಬ ಸಮರ್ಥನೆಯನ್ನು ಜಂಟಿಕ್ರಿಯಾ ಸಮಿತಿಯ ಮುಖಂಡರು ನೀಡುತ್ತಿದ್ದಾರೆ.





