ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ನೋಟಿಸ್ ನೀಡಲು ಅಧಿಕಾರವಿದೆಯೇ ಹೊರತು ಅವರಿಗೆ ಇಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಯುತವಾಗಿ ಚುನಾವಣೆ ಗೆದ್ದಿದ್ದೇವೆ. ನ್ಯಾಯಯುತವಾಗಿ ಚುನಾವಣೆ ನಡೆಸಲು ಅವರಿಗೆ ಅವಕಾಶವಿದೆಯೇ ಹೊರತು ನೋಟಿಸ್ ನೀಡುವ ಹಕ್ಕಿಲ್ಲ. ಏನಿದ್ದರೂ ಕಾನೂನಾತ್ಮಕವಾಗಿ ಉತ್ತರ ನೀಡುತ್ತೇವೆ ಎಂದು ಹೇಳಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಬಿಜೆಪಿಯಲ್ಲಿ ಕೆಲವು ಖಾಲಿ ಟ್ರಂಕುಗಳಿವೆ. ಬರೀ ಶಬ್ಧ ಮಾಡುವವರಿಗೂ ನಾನು ಎಲ್ಲಾ ಮಾಹಿತಿ ತಿಳಿಸಿಕೊಡುತ್ತಿದ್ದೇನೆ. ಏಕೆಂದರೆ ಇದುವರೆಗೂ ಯಾರೊಬ್ಬರು ಅನುದಾನ ತಂದಿಲ್ಲ. ತರಲು ಆಸಕ್ತಿಯನ್ನೂ ತೋರಿಲ್ಲ ಎಂದು ಬಿಜೆಪಿ ಸಂಸದರ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಬೆಂಗಳೂರು ಅಭಿವೃದ್ಧಿಗೆ ಅನುದಾನ ನೀಡುವ ಬಗ್ಗೆ ಮಾತನಾಡಿದೆ. ಅವರು ನಮ್ಮ ಮನವಿಯನ್ನು ಗಮನಿಸುವುದಾಗಿ ಹೇಳಿದ್ದಾರೆ. ಬೆಂಗಳೂರು ಜಾಗತಿಕ ನಗರ ಎನ್ನುವುದನ್ನು ಅವರು ಒಪ್ಪಿಕೊಂಡಿದ್ದಾರೆ. ಆದ್ದರಿಂದಲೇ ಅವರು ಬೆಂಗಳೂರು ಭಾರತವನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ ಎಂದರು.





