ಬೆಂಗಳೂರು: ಕರ್ನಾಟಕ ಆಡಳಿತ ಸೇವೆ( ಕೆಎಎಸ್)ಯ ಮುಖ್ಯ ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಸ್ಪಷ್ಟಪಡಿಸಿದೆ.
ಒಂದೇ ಕೊಠಡಿಯಲ್ಲಿ ಮುಖ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳು ಸಂದರ್ಶನಕ್ಕೆ (ವೈವೋ) ಆಯ್ಕೆಯಾಗಿದ್ದಾರೆ ಎಂದು ಕೆಲವು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿ ಇದರಲ್ಲಿ ದೊಡ್ಡಮಟ್ಟದ ಆಕ್ರಮ ನಡೆದಿದೆ ಎಂದು ಆರೋಪಿಸಿದ್ದರು.
ಇದರಿಂದ ತಕ್ಷಣವೇ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ತಕ್ಷಣವೇ ಆರೋಪ ಕುರಿತು ಸಮಗ್ರ ವರದಿ ನೀಡುವಂತೆ ಕೆಪಿಎಸ್‌ಸಿ ಕಾರ್ಯದರ್ಶಿ ಜ್ಯೋತಿ ಅವರಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದರು.
ಮುಖ್ಯ ಕಾರ್ಯದರ್ಶಿಗಳ ಸೂಚನೆ ಮೇರೆಗೆ ವರದಿ ಸಲ್ಲಿಸಿರುವ ಕೆಪಿಸಿ ಕಾರ್ಯದರ್ಶಿ ಜ್ಯೋತಿ, ಮುಖ್ಯ ಪರೀಕ್ಷೆಯ ವೇಳೆ ಯಾವುದೇ ರೀತಿಯ ಅಕ್ರಮ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿ ನಡೆದಿದ್ದು, ಅಭ್ಯರ್ಥಿಗಳು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡಿಕೊಂಡಿದ್ದಾರೆಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ ಎಂದು ಗೊತ್ತಾಗಿದೆ.
ವರದಿಯಲ್ಲಿ ಪ್ರಮುಖವಾಗಿ ಮೂರು ವಿಷಯಗಳನ್ನು ಸ್ಪಷ್ಟಪಡಿಸಲಾಗಿದೆ. ಮೊದಲನೆಯದಾಗಿ, ಒಂದೇ ಕೊಠಡಿಯಿಂದ 15 ಜನ ಅಭ್ಯರ್ಥಿಗಳು ಉತ್ತೀರ್ಣ ಆಗಿದ್ದಾರೆ ಎಂಬ ಆರೋಪ ಸತ್ಯವಲ್ಲ ಎಂದು ದೃಡಪಡಿಸಲಾಗಿದೆ. ಆ ಕೊಠಡಿಯಿಂದ 15 ಜನ ಅಲ್ಲ, 11 ಜನ ಮಾತ್ರ ಉತ್ತೀರ್ಣರಾಗಿದ್ದಾರೆ. ಪರೀಕ್ಷಾ ಕೇಂದ್ರಗಳಲ್ಲಿ ಸಾಮಾನ್ಯವಾಗಿ ಹಲವು ಪ್ರತಿಭಾವಂತ ಅಭ್ಯರ್ಥಿಗಳು ಇದ್ದರೆ ಒಂದೇ ಸ್ಥಳದಿಂದ ಹೆಚ್ಚು ಮಂದಿ ಉತ್ತೀರ್ಣ ಆಗುವುದು ಅಸಾಧಾರಣ ವಿಷಯವಲ್ಲ ಎಂದು ಹೇಳಲಾಗಿದೆ.
ಎರಡನೆಯದಾಗಿ, ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂಬುದನ್ನು ದೃಢಪಡಿಸಲು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅನುಮಾನ ವ್ಯಕ್ತವಾದ ಪರೀಕ್ಷಾ ಕೊಠಡಿಗಳ ದೃಶ್ಯಗಳನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಲಾಗಿದ್ದು, ಪರೀಕ್ಷೆಯ ವೇಳೆ ಯಾವುದೇ ಅಕ್ರಮ ಅಥವಾ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಿಲ್ಲ ಎಂದು ತಿಳಿಸಲಾಗಿದೆ.
ಮೂರನೆಯದಾಗಿ, ಇದುವರೆಗೆ ಯಾವುದೇ ಅಭ್ಯರ್ಥಿ ಅಥವಾ ವ್ಯಕ್ತಿ ನೇರವಾಗಿ ಕೆಪಿಎಸ್‌ಗೆ ಬಂದು ಅಧಿಕೃತ ದೂರು ಸಲ್ಲಿಸಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.





